ನವದೆಹಲಿ,ಮೇ 11- ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರವು ಇದೇ 14ರಂದು ಸುಪ್ರೀಂಕೋರ್ಟ್‍ಗೆ ಕರಡು ಯೋಜನೆಯನ್ನು ಸಲ್ಲಿಸಲಿಸಲು ತೀರ್ಮಾನಿಸಿದೆ.
ವಿಶೇಷವೆಂದರೆ ಮೇ 15ರಂದು ಕರ್ನಾಟಕ ವಿಧಾನಸಭೆಯ ಫಲಿತಾಂಶ ಪ್ರಕಟಗೊಳ್ಳಲಿದೆ. ಅದಕ್ಕೂ ಮುನ್ನವೇ ಕೇಂದ್ರ ಸರ್ಕಾರ ಕರಡು ಸಲ್ಲಿಸಲು ಮುಂದಾಗಿದೆ.
ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ನಡುವೆ ಉಂಟಾಗಿರುವ ನದಿನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ನಿರ್ದೇಶನದಂತೆ ನಾವು 14ರಂದು ಕರಡು ಯೋಜನೆಯನ್ನು ಸಲ್ಲಿಸಲಿದ್ದೇವೆ. ಈಗಾಗಲೇ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಯು.ಪಿ.ಸಿಂಗ್ ತಿಳಿಸಿದ್ದಾರೆ.
ಈ ಹಿಂದೆ ನಾಲ್ಕು ರಾಜ್ಯಗಳಿಗೆ ನದಿ ನೀರು ಹಂಚಿಕೆ ಮಾಡುವ ಸಂಬಂಧ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠವು ಕರಡನ್ನು ಸಿದ್ದಪಡಿಸುವಂತೆ ಸೂಚಿಸಿ ಮೇ 14ರ ಗಡುವು ನೀಡಿತು.
ಕೇಂದ್ರ ಸರ್ಕಾರ ಕಾವೇರಿ ನದಿ ನೀರುನಿರ್ವಹಣಾ ಮಂಡಳಿ ರಚಿಸಲು ಮುಂದಾಗಿಲ್ಲ. ನ್ಯಾಯಾಲಯಕ್ಕೆ ಕರಡು ಸಲ್ಲಿಸುವ ಮುನ್ನ ಸಂಬಂಧಪಟ್ಟ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಇಲಾಖಾ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಕರಡು ಸಿದ್ಧಪಡಿಸದೆ ಇರುವುದಕ್ಕೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿತ್ತು. ಈ ಹಿನ್ನೆಲೆಯಲ್ಲಿ 10 ದಿನದೊಳಗೆ ನೀವು ಕರಡು ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕೆಂದು ಆದೇಶ ನೀಡಿತ್ತು. ತಮಿಳುನಾಡು ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂದು ಕೇಂದ್ರದ ಮೇಲೆ ಒತ್ತಡ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಭಾರೀ ಪ್ರತಿಭಟನೆ ಹಾಗೂ ಆಕ್ರೋಶ ವ್ಯಕ್ತವಾಗಿತ್ತು.
ಆದರೆ ನಿರ್ವಹಣಾ ಮಂಡಳಿಗೆ ಕರ್ನಾಟಕ ಸರ್ಕಾರ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ನಿರ್ವಹಣಾ ಮಂಡಳಿ ರಚನೆ ಮಾಡುವುದು ಬೇಡ. ಯಥಾಸ್ಥಿತಿಯಲ್ಲಿ ಮುಂದುವರೆಯಲಿ ಎಂಬುದು ರಾಜ್ಯದ ಬೇಡಿಕೆ. ಈ ನಡುವೆ ಕರ್ನಾಟಕ ಸರ್ಕಾರ ಬಾಕಿ ಉಳಿಸಿಕೊಂಡಿರುವ ನೀರನ್ನು ಹರಿಸಬೇಕೆಂದು ತಮಿಳುನಾಡು ನ್ಯಾಯಾಲಯದ ಮೆಟ್ಟಿಲೇರಿತ್ತು.
ನೀವು ತಮಿಳುನಾಡಿಗೆ 4 ಟಿಎಂಸಿ ನೀರು ಹರಿಸಲು ಸಾಧ್ಯವೇ ಎಂಬುದನ್ನು 10 ದಿನದೊಳಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಸೂಚಿಸಿದೆ. ನಾವು ಈಗಾಗಲೇ ನೆರೆಯ ರಾಜ್ಯಕ್ಕೆ ಹೆಚ್ಚುವರಿಯಾಗಿ ನೀರು ಹರಿಸಿದ್ದೇವೆ. ನಮ್ಮ ಡ್ಯಾಮ್‍ಗಳಲ್ಲೇ ನೀರು ನಿರೀಕ್ಷಿತ ಮಟ್ಟದಲ್ಲಿ ಸಂಗ್ರಹಣೆಯಾಗಿಲ್ಲ.
ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಅನೇಕ ಕಡೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕೃಷಿ ಚಟುವಟಿಕೆಗಳಿಗೆ ನಾವು ನೀರು ಹರಿಸುತ್ತಿಲ್ಲ. ಇಂಥ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು.
ಕೆಲ ದಿನಗಳ ಹಿಂದೆ 2007ರಲ್ಲಿ ನೀಡಲಾಗಿದ್ದ ಐತೀರ್ಪು ಪ್ರಶ್ನಿಸಿ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೇಟ್ಟಿಲೇರಿದ್ದವು. ಒಂದು ದಶಕ ಕಾಲ ಸುದೀರ್ಘ ಚರ್ಚೆ ನಡೆದ ಬಳಿಕ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿತ್ತು. ಈ ಪ್ರಕಾರವಾಗಿ ರಾಜ್ಯಕ್ಕೆ ಹೆಚ್ಚುವರಿಯಾಗಿ 14.75 ಟಿಎಂಸಿ ನೀರು ಬಳಸಿಕೊಳ್ಳಲು ಅವಕಾಶ ಸಿಕ್ಕಿತ್ತು.