ಬೆಂಗಳೂರು, ಮೇ 10- ನಾನು ಹದಿನೈದು ವರ್ಷದಿಂದಲೂ ದೇವಸ್ಥಾನ ಸೇರಿದಂತೆ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೂ ಭೇಟಿ ನೀಡುತ್ತಿದ್ದೇನೆ. ಆದರೆ, ಅದನ್ನು ಈಗ ಬಿಜೆಪಿ ಟೀಕೆ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ರಾಜ್ಯ ನಾಯಕರ ಜತೆ ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ವಿಶೇಷ ಪತ್ರಿಕಾಗೋಷ್ಠಿ ನಡೆಸಿ ಸುದೀರ್ಘವಾಗಿ ಮಾತನಾಡಿದ ಅವರು, ಭಾರತದಲ್ಲಿ ಹಲವಾರು ಧರ್ಮಗಳು, ಆಚರಣೆಗಳು, ಭಾಷೆಗಳಿವೆ. ರಾಜಕೀಯ ನಾಯಕನಾಗಿ ಅವೆಲ್ಲವನ್ನೂ ಗೌರವಿಸಬೇಕಾಗಿರುವುದು ನನ್ನ ಧರ್ಮ. ನಾನು ದೇವಸ್ಥಾನಕ್ಕೆ ಮಾತ್ರ ಹೋಗುವುದಿಲ್ಲ. ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಹೋಗುತ್ತೇನೆ. 15 ವರ್ಷಗಳಿಂದಲೂ ಭೇಟಿ ನೀಡುತ್ತಿದ್ದೇನೆ. ಆದರೆ, ಬಿಜೆಪಿಯವರು ಇತ್ತೀಚೆಗೆ ಅದನ್ನು ಗಮನಿಸಿ ನಾನು ಚುನಾವಣೆ ಹಿಂದು ಎಂದು ಟೀಕೆ ಮಾಡುತ್ತಿದ್ದಾರೆ.
ಮೊದಲಿಗೆ ಹಿಂದು ಎಂಬುದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ. ಹಿಂದು ಎಂಬುದು ಒಂದು ದೃಷ್ಟಿಕೋನ. ಜೀವನ ಶೈಲಿ. ಅದನ್ನು ರಾಜಕೀಯಕ್ಕೆ ಬಳಸುವುದು ಸರಿಯಲ್ಲ ಎಂದರು.
ಕಾಂಗ್ರೆಸ್‍ನವರು ದಲಿತರ ಬಗ್ಗೆ ಮಾತನಾಡಿದರೆ ಬಿಜೆಪಿಯವರಿಗೆ ತಳಮಳವಾಗುತ್ತಿದೆ. ನಾವು ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಪ್ರಧಾನಿ ಮೋದಿ ಅವರು ಆಂಧ್ರಪ್ರದೇಶದಲ್ಲಿ ವೇಮುಲನ ಹತ್ಯೆಯಾದಾಗ, ಉತ್ತರ ಪ್ರದೇಶ ಮತ್ತು ಉನ್ನಾವೊದಲ್ಲಿ ದಲಿತರ ಮೇಲೆ ದೌರ್ಜನ್ಯವಾದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನವಾಗಿದ್ದೇಕೆ ? ಕೇಂದ್ರ ಸರ್ಕಾರ ದಲಿತರ ಅಭಿವೃದ್ಧಿಗೆ ನೀಡಿದ ಒಟ್ಟು ಹಣದ ಅರ್ಧದಷ್ಟು ಕರ್ನಾಟಕ ರಾಜ್ಯ ಒಂದೇ ಇಲ್ಲಿನ ದಲಿತರ ಅಭಿವೃದ್ಧಿಗೆ ಖರ್ಚು ಮಾಡಿದೆ ಎಂದು ಅವರು ಹೇಳಿದರು.
ಬಿಜೆಪಿಯವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ರಾಹುಲ್‍ಗಾಂಧಿ, ನನ್ನ ತಾಯಿ ಈ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಅವರು ಸಂಪೂರ್ಣ ಭಾರತೀಯರು, ಇಲ್ಲಿನ ಎಲ್ಲ ಭಾರತೀಯರಂತೆ ಅವರು ಕೂಡ ಉತ್ತಮ ಭಾರತೀಯರು ಎಂದು ತಮ್ಮ ತಾಯಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಬೆಂಗಳೂರಿನ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ರಾಜಕೀಯವಾಗಿ ಚರ್ಚೆ ಮಾಡಲೇಬೇಕಿದೆ. ದಲಿತರ, ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಚರ್ಚೆ ಮಾಡದೆ ಮೋದಿ ಅವರಂತೆ ಬುಲೆಟ್ ಟ್ರೈನ್ ಬಗ್ಗೆ ಚರ್ಚೆ ಮಾಡಲು ಸಾಧ್ಯವೇ ಎಂದು ರಾಹುಲ್‍ಗಾಂಧಿ ತಿರುಗೇಟು ನೀಡಿದರು.
ಮಹದಾಯಿ ವಿವಾದ ಸೌಹಾರ್ದಯುತವಾಗಿ ಬಗೆಹರಿಯಬೇಕು. ಅದಕ್ಕೆ ಪ್ರಧಾನಿಯವರು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೂ ಕಾಂಗ್ರೆಸ್ ಬದ್ಧವಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದು, ಅದರ ಲಾಭ ಜನರಿಗೆ ತಲುಪಬೇಕು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಈ ರೀತಿ ಉಳಿತಾಯವಾದ ಹಣದಲ್ಲಿ ರೈತರ ಸಾಲ ಮನ್ನಾ, ದುರ್ಬಲ ವರ್ಗದವರಿಗೆ ಸಹಾಯ ಸೇರಿದಂತೆ ಜನಪರ ಯೋಜನೆಗಳನ್ನು ಮಾಡಿತ್ತು. ಆದರೆ, ಮೋದಿ ಸರ್ಕಾರ ಜನರ ದುಡ್ಡನ್ನು ಬಿಜೆಪಿಯ ಸ್ನೇಹಿತರಿಗೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ಬಿ.ಕೆ.ಹರಿಪ್ರಸಾದ್, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್.ಮುನಿಯಪ್ಪ, ರೆಹಮಾನ್‍ಖಾನ್, ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಣದೀಪ್ ಸುರ್ಜೆವಾಲ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.