ನವದೆಹಲಿ, ಮೇ 10-ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಹಗರಣದ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಬಂಧಿಯೊಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಇಂದು ಬಂಧಿಸಿದೆ.
ಕೇಜ್ರಿವಾಲ್ ಭಾವಮೈದುನನ ಪುತ್ರ ವಿನಯ್ ಬನ್ಸಾಲ್ ಅವರನ್ನು ಇಂದು ಮುಂಜಾನೆ ಬಂಧಿಸಲಾಗಿದೆ ಎಂದು ಎಸಿಬಿ ಮುಖ್ಯಸ್ಥ ಅರವಿಂದ್ ದೀಪ್ ತಿಳಿಸಿದ್ದಾರೆ.
ಕಳೆದ ವರ್ಷ ಮೇ 9ರಂದು ಈ ಪ್ರಕರಣದ ಸಂಬಂಧ ಎಸಿಬಿ ದೆಹಲಿ ಮುಖ್ಯಮಂತ್ರಿರವರ ಭಾವಮೈದುನ ಸುರೇಂದರ್ ಬನ್ಸಾಲ್ ನಡೆಸುತ್ತಿದ್ದ ಕಂಪನಿ ಹಾಗೂ ಇನ್ನೆರಡು ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಬನ್ಸಾಲ್, ಕಮಲ್ ಸಿಂಗ್ ಮತ್ತು ಪವನ್ ಕುಮಾರ್ ಅವರ ಒಡೆತನದ ರೇಣು ಕನ್ಸ್ಟ್ರಕ್ಷನ್ಸ್ ಸೇರಿದಂತೆ ಮೂರು ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಬನ್ಸಾಲ್ಗೆ ಗುತ್ತಿಗೆ ಮಂಜೂರು ಮಾಡುವಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಹಾಗೂ ಲೋಕೋಪಯೋಗಿ ಸಚಿವ ಸತ್ಯೇಂದ್ರ ಜೈನ್ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ರಸ್ತೆಗಳ ಭ್ರಷ್ಟಾಚಾರ ನಿಗ್ರಹ ಸಂಘ (ಆರ್ಎಸಿಒ) ಸ್ಥಾಪಕ ರಾಹುಲ್ ಶರ್ಮ ದೂರು ನೀಡಿದ್ದರು. ಪೂರ್ಣಗೊಳ್ಳದ ಕಾಮಗಾರಿಗಳಿಗೂ ನಕಲಿ ಬಿಲ್ಗಳನ್ನು ಪಿಡಬ್ಲ್ಯುಡಿ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು.