ಬೆಂಗಳೂರು, ಮೇ 10-ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ 48 ಗಂಟೆಗಳು ಬಾಕಿ ಇದೆ. ಮತದಾರರ ಓಲೈಕೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನ ಘಟಾನುಘಟಿ ನಾಯಕರು ಕೊನೆ ಕ್ಷಣದಲ್ಲಿ ಭರ್ಜರಿ ಮತಪ್ರಚಾರ ನಡೆಸಿದ್ದಾರೆ.
ಒಂದೇ ದಿನ ಬಿಜೆಪಿಯಿಂದ 50 ಕಡೆ ರೋಡ್‍ಶೋ ನಡೆದರೆ ಕಾಂಗ್ರೆಸ್‍ನಿಂದ ವಿವಿಧ ಭಾಗಗಳಲ್ಲಿ ಪಾದಯಾತ್ರೆ, ರೋಡ್‍ಶೋ ಮುಂತಾದ ಕಾರ್ಯಕ್ರಮಗಳ ಮೂಲಕ ಪ್ರಚಾರ ಮಾಡಲಾಯಿತು.
ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಬಹಿರಂಗ ಪ್ರಚಾರದ ಕೊನೆ ದಿನವಾದ ಇಂದು ಪತ್ರಿಕಾಗೋಷ್ಠಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರಲ್ಲದೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಿ ಪ್ರಚಾರ ನಡೆಸಿದರು.
ನಿನ್ನೆ ಮೃತಪಟ್ಟ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ಮಾಡಳ್ಳಿ ಅವರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದರು. ಸಂಸದ ಶ್ರೀರಾಮುಲು ಸ್ಪರ್ಧಿಸಿರುವ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ, ಯಡಿಯೂರಪ್ಪ ನಡೆಸಿದ ರೋಡ್‍ಶೋ ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.
ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿವಿಧ ಭಾಗಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರುಗಳು ಶತಾಯಗತಾಯ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಕಳೆದ 20 ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ತಮ್ಮ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಕೊನೆ ಕ್ಷಣದವರೆಗೂ ಪ್ರಚಾರ ನಡೆಸಿದರು.
ಶಿಕಾರಿಪುರದಲ್ಲಿ ಯಡಿಯೂರಪ್ಪ ಪರ ಅಮಿತ್‍ಷಾ ಪ್ರಚಾರ ನಡೆಸಿದರು. ಮುಖ್ಯಮಂತ್ರಿಗಳಾದ ಯೋಗಿಆದಿತ್ಯನಾಥ್, ಶಿವರಾಜ್ ಚೌಹಾಣ್, ರಮಣ್‍ಸಿಂಗ್ ಹಾಗೂ 20ಕ್ಕೂ ಹೆಚ್ಚು ಸಚಿವರು ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದರು.
ಕಾಂಗ್ರೆಸ್‍ನ ಕೇಂದ್ರದ ಹಲವುನಾಯಕರು ಇಂದು ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಒಟ್ಟಾರೆ ಮೂರೂ ಪಕ್ಷಗಳ ಮುಖಂಡರು, ಪಕ್ಷೇತರ ಅಭ್ಯರ್ಥಿಗಳು ಕೂಡ ಮತದಾರರ ಮನವೊಲಿಕೆಯ ಅಂತಿಮ ಕಸರತ್ತು ಜೋರಾಗಿತ್ತು.