ಬೆಂಗಳೂರು, ಮೇ 9- ವಿಧಾನಸಭೆ ಚುನಾವಣೆಗೆ ಜೆಡಿಎಸ್ ಬಿಡುಗಡೆ ಮಾಡಿದ್ದ ಪ್ರಣಾಳಿಕೆ ಜತೆಗೆ ಕೆಲವು ಪೂರಕವಾದ ಅಂಶಗಳನ್ನು ಇಂದು ಬಿಡುಗಡೆಗೊಳಿಸಲಾಗಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಆದೇಶದಂತೆ ರಾಜ್ಯ ಕಾರ್ಯದರ್ಶಿ ಎಂ.ಎಸ್.ನಾರಾಯಣರಾವ್ ಇಂದು ಕೆಲವೊಂದು ಪೂರಕ ಅಂಶಗಳ ಬಿಡುಗಡೆಗೊಳಿಸಿದರು.
ಪ್ರತ್ಯೇಕ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ, ಕ್ರೈಸ್ತರ ಜೆರುಸಲೇಂ ಯಾತ್ರೆಗೆ ಸಹಾಯ ಧನ, ಕ್ರೈಸ್ತ ಸಮುದಾಯ ಭವನ ಹಾಗೂ ಚರ್ಚ್ಗಳ ಜೀರ್ಣೋದ್ಧಾರ, ಅವರ ಧಾರ್ಮಿಕ ಕ್ಷೇತ್ರಗಳಾದ ಚರ್ಚ್, ಪ್ರಾರ್ಥನಾ ಮಂದಿರಗಳಿಗೆ ಹೆಚ್ಚಿನ ಸೌಲಭ್ಯ, ಧರ್ಮ ಗುರುಗಳಿಗೆ ಸೂಕ್ತ ರಕ್ಷಣೆ, ಕ್ರೈಸ್ತ ಸಮುದಾಯಕ್ಕೆ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಅವಕಾಶ, ತಾಂತ್ರಿಕ ತರಬೇತಿ ಕೇಂದ್ರ ಸ್ಥಾಪನೆ.
ವಿಕಲಚೇತನರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ, ವಿಕಲಚೇತನರ ಹಕ್ಕು ಕಾಯ್ದೆಯನ್ನು ಪೂರ್ಣ ಜಾರಿಗೊಳಿಸುವುದು, ವಿಕಲಚೇತನರ ಆರೈಕೆಯಲ್ಲಿ ತೊಡಗುವವರಿಗೆ ಸಹಾಯ ಧನ.
ತೃತೀಯ ಲಿಂಗಿಯರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ, ಕಟ್ಟಡ ಕಾರ್ಮಿಕರಿಗೆ ಸಹಾಯ ಧನ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ನೆರವು, ಕಾರ್ಮಿಕರಲ್ಲಿ ಕಾನೂನು ಅರಿವು ಮೂಡಿಸಲು ವಾಲ್ಮೀಕಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಸರ್ಕಾರಿ ಜಮೀನು, ಪಿಂಚಣಿ ಯೋಜನೆ ಪರಿಷ್ಕರಿಸಿ ಸೂಕ್ತ ಯೋಜನೆ ಜಾರಿಗೊಳಿಸಲು ಕ್ರಮ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಕ್ರಮ, ಅಪರಾಧಿಗಳಿಗೆ ಶೀಘ್ರ ಶಿಕ್ಷೆ ದೊರೆಯುವಂತೆ ಮಾಡಲು ಕ್ರಮ, ಮಹಿಳಾ ಆರೋಪಿಗಳ ವಿಚಾರಣೆ ಮಹಿಳಾ ಸಿಬ್ಬಂದಿಗಳಿಂದ ಮಾತ್ರ ನಡೆಸಲು ಕ್ರಮ, ಎ.ಟಿ.ರಾಮಸ್ವಾಮಿ ನೇತೃತ್ವದ ಸದನ ಸಮಿತಿ ವರದಿ ಆಧರಿಸಿ ಸರ್ಕಾರಿ ಭೂಮಿ ಒತ್ತುವರಿ ತಡೆಯಲು ಕ್ರಮ ಸೇರಿದಂತೆ ಇನ್ನಿತರ ಹಲವಾರು ಪ್ರಣಾಳಿಕೆ ಪೂರಕ ಅಂಶಗಳನ್ನು ಬಿಡುಗಡೆಗೊಳಿಸಲಾಗಿದೆ.