ಬೆಂಗಳೂರು, ಮೇ 9-ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 7 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಸಂಜೆ 7 ಗಂಟೆಗೆ ಸಾಮೂಹಿಕ ಮೇಣದ ಬತ್ತಿ ಬೆಳಗಿಸುವ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಕೆ.ವಿ.ದಯಾನಂದ ತಿಳಿಸಿದ್ದಾರೆ.
ಮತದಾನದ ಮಹತ್ವವನ್ನು ಬಿಂಬಿಸುವುದರ ಜೊತೆಗೆ ತಪ್ಪದೆ ಪ್ರತಿಯೊಬ್ಬರು ಮತದಾನ ಮಾಡುವುದು ಕಡ್ಡಾಯ ಎಂಬುದನ್ನು ಮನವರಿಕೆ ಮಾಡಿಕೊಡುವ ನಿಮಿತ್ತ ಬೆಂಗಳೂರು ನಗರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇಂದು ಸಾಮೂಹಿಕವಾಗಿ ಮೇಣಬತ್ತಿ ಬೆಳಗಿ ಜನರನ್ನು ಆಕರ್ಷಿಸಲಾಗುವುದು ಎಂದು ಹೇಳಿದರು.
ನಿನ್ನೆ ಈ ರೀತಿಯ ವಿನೂತನ ಕಾರ್ಯಕ್ರಮ ಆಯೋಜಿಸುವ ಸಂಬಂಧವಾಗಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸಭೆ ಹಮ್ಮಿಕೊಂಡು ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ದಯಾನಂದ್ ಸೂಚಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಅರ್ಚನ ಅವರು ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಮಾಹಿತಿ ನೀಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿ/ಸಿಬ್ಬಂದಿಗಳು ಶಾಲಾಮಕ್ಕಳು ಸಾಮೂಹಿಕವಾಗಿ ಮೇಣದಬತ್ತಿ ಬೆಳಕಿನಲ್ಲಿ ಜಾಥಾ ನಡೆಸುವುದಾಗಿ ತಿಳಿಸಿದರು.
ಬೆಳಕಿನ ಜಾಥಾ ಕಾರ್ಯಕ್ರಮನ್ನು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 7 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಆಯೋಜಿಸಲಾಗಿದ್ದು, ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಆಂಜನೇಯ ಪ್ರತಿಮೆಯಿಂದ ನ್ಯೂಟೌನ್ ಬಸ್ ನಿಲ್ದಾಣದವರೆಗೆ, ಬ್ಯಾಟರಾಯನಪುರ ಕ್ಷೇತ್ರದಲ್ಲಿ ಗುಂಡಾಂಜನೇಯ ದೇವಸ್ಥಾನದಿಂದ ಜಾಥಾ ಆರಂಭಿಸಲಾಗುವುದು.
ದಾಸರಹಳ್ಳಿ ಕ್ಷೇತ್ರದಲ್ಲಿ ಬಿ.ಬಿ.ಎಂ.ಪಿ. ಕಛೇರಿಯಿಂದ ಬಗಲಗುಂಟೆವರೆಗೆ, ಯಶವಂತಪುರ ಕ್ಷೇತ್ರದಲ್ಲಿ ಏರೋಹಳ್ಳಿ ಬಿಬಿಎಂಪಿ ಕಛೇರಿಯಿಂದ ಅಂಜನಾನಗರದವರೆಗೆ, ಮಹಾದೇವಪುರ ಕ್ಷೇತ್ರದಲ್ಲಿ ಟಿನ್ಫ್ಯಾಕ್ಟರಿಯಿಂದ ಆರಂಭಿಸಲಾಗುವುದು. ಆನೇಕಲ್ ಕ್ಷೇತ್ರದಲ್ಲಿ ರಾಘವೇಂದ್ರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಆಯೋಜಿಸಲಾಗಿದೆ.