ನವದೆಹಲಿ, ಮೇ 9-ಐಆರ್‍ಸಿಟಿಸಿ ಹಗರಣದ ಸಂಬಂಧ ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಹಾಗೂ ಪುತ್ರ ತೇಜಸ್ವಿ ಯಾದವ್ ವಿರುದ್ಧ ಕೇಂದ್ರಿಯ ತನಿಖಾ ದಳ(ಸಿಬಿಐ) 20,000 ದಾಖಲೆ ಪತ್ರಗಳನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್‍ಗೆ ಸಲ್ಲಿಸಿದೆ.
ಈ ಪ್ರಕರಣದಲ್ಲಿ ರಾಬ್ಡಿದೇವಿ ಮತ್ತು ತೇಜಸ್ವಿ ಯಾದವ್‍ರನ್ನು ಸಿಬಿಐ ತನಿಖೆಗೆ ಒಳಪಡಿಸಿದ ಒಂದು ತಿಂಗಳ ನಂತರ, ತಾನು ಈವರೆಗೆ ಸಂಗ್ರಹಿಸಿರುವ 20,000ಕ್ಕೂ ಅಧಿಕ ದಾಖಲೆಪತ್ರಗಳು ಮತ್ತು ದಸ್ತಾವೇಜುಗಳನ್ನು ಸಲ್ಲಿಸಿದೆ.
ರೈಲ್ವೆ ಇಲಾಖೆಯ ಐಆರ್‍ಸಿಟಿಸಿ ಕರಾರಿಗಾಗಿ ನಿರ್ದಿಷ್ಟ ಬಿಡ್ಡುದಾರರಿಗೆ ಗುತ್ತಿಗೆಗಳನ್ನು ನೀಡಲು ಕೋಟ್ಯಂತರ ರೂ.ಗಳ ಬೆಲೆಬಾಳುವ ಭೂಮಿಯನ್ನು ಲಂಚ ರೂಪದಲ್ಲಿ ಪಡೆದ ಆರೋಪವನ್ನು ಲಾಲು ಕುಟುಂಬ ಎದುರಿಸುತ್ತಿದೆ. ಲಾಲು, ರಾಬ್ಡಿ, ತೇಜಸ್ವಿ ಅವರಲ್ಲದೇ ಇತರ 11 ಮಂದಿ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಸಿಬಿಐ ಎಫ್‍ಆರ್‍ಐ ಸಲ್ಲಿಸಿದೆ.
ಬಹುಕೋಟಿ ರೂ.ಗಳ ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಮೂರು ಮೇವು ಹಗರಣಗಳಲ್ಲಿ ಲಾಲು ಅವರಿಗೆ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ದೋಷಿಯನ್ನಾಗಿ ಪರಿಗಣಿಸಿ ಪ್ರತ್ಯೇಕ ಪ್ರಕರಣಗಳಲ್ಲಿ ಜೈಲು ಶಿಕ್ಷೆ ವಿಧಿಸಿದೆ.