ಬೆಂಗಳೂರು, ಮೇ 9- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಅಪಾರ್ಟ್‍ಮೆಂಟ್‍ನಲ್ಲಿ ಸಾವಿರಾರು ವೋಟರ್ ಐಡಿಗಳು ಪತ್ತೆಯಾಗಿರುವ ಪ್ರಕರಣ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿರುವುದು ಮತದಾರರಲ್ಲಿ ಗೊಂದಲ ಮೂಡಿಸಿದೆ.
ವೋಟರ್ ಐಡಿ ಸಂಗ್ರಹಣೆ ಹಿಂದೆ ಭಾರೀ ಗೋಲ್‍ಮಾಲ್ ನಡೆದಿರುವುದರಿಂದ ಆರ್‍ಆರ್ ನಗರ ಕ್ಷೇತ್ರದ ಚುನಾವಣೆ ಡೋಲಾಯಮಾನ ಪರಿಸ್ಥಿತಿ ಉದ್ಭವಿಸಿದೆ.
ಪ್ರಕರಣದ ಗಂಭೀರತೆ ಅರಿತಿರುವ ಪೆÇಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ರಾತ್ರಿ ಗಲಾಟೆ ಸಂಬಂಧ ವೆಂಕಟೇಶ್ ಮತ್ತು ರಘು ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದು, ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಬಂಧನಕ್ಕೂ ಕಾರ್ಯಾಚರಣೆ ಕೈಗೊಂಡಿದ್ದಾರೆ.
ನಗರದ ಜಾಲಹಳ್ಳಿಯ ಎಸ್‍ಎಲ್‍ವಿ ಪಾರ್ಕ್‍ವ್ಯೂ ಅಪಾರ್ಟ್‍ಮೆಂಟ್‍ನಲ್ಲಿ 10 ಸಾವಿರಕ್ಕೂ ಹೆಚ್ಚು ಗುರುತಿನ ಚೀಟಿಗಳು ಪತ್ತೆಯಾಗಿದ್ದವು ಜೊತೆಗೆ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಳಸುವ ಫಾರಂ ನಂ.6 ಸುಮಾರು 1 ಲಕ್ಷಕ್ಕೂ ಹೆಚ್ಚು ನಮೂನೆಗಳು ದೊರೆತಿವೆ.
ಪತ್ತೆಯಾಗಿರುವ ಮತದಾರರ ಗುರುತಿನ ಚೀಟಿಯಲ್ಲಿ ಬಹುತೇಕ ಎಲ್ಲವೂ ಅಸಲಿಯಾಗಿವೆ. ಅಲ್ಲದೆ ಮತ್ತಷ್ಟು ಮತದಾರರನ್ನು ಸೇರಿಸಲು ಪ್ರಯತ್ನ ನಡೆಸಿರುವುದು ಚುನಾವಣೆಯ ಪಾವಿತ್ರ್ಯತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಅಸಲಿ ಮತ್ತು ನಕಲಿ ಮತದಾರರ ಗುರುತಿನ ಚೀಟಿ ಪತ್ತೆಯದ ಹಿನ್ನೆಲೆಯಲ್ಲಿ ಇಡೀ ದಿನ ಆಯೋಗ ಮೇಲಿಂದ ಮೇಲೆ ಸಭೆಗಳನ್ನು ನಡೆಸಿದೆ.
ನಿನ್ನೆ ರಾತ್ರಿಯಿಂದ ಅಪಾರ್ಟ್‍ಮೆಂಟ್‍ಗೆ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್, ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಭೇಟಿ ನೀಡಿದರು. ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಪ್ರಮುಖ ರಾಜಕಾರಣಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಕಳೆದ ರಾತ್ರಿಯಿಂದಲೇ ಜಾಲಹಳ್ಳಿ ಪೆÇಲೀಸ್ ಠಾಣೆಯಲ್ಲಿ ಬೀಡು ಬಿಟ್ಟಿರುವ ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್, ಬಿಬಿಎಂಪಿ ಆಯುಕ್ತ ಹಾಗೂ ನಗರ ಚುನಾವಣಾಧಿಕಾರಿ ಮಹೇಶ್ವರ ರಾವ್, ಐಜಿಪಿ ವೇಣುಗೋಪಾಲ್, ಹಿರಿಯ ಐಎಎಸ್ ಅಧಿಕಾರಿ ಇಂದಿರಾ ಹಾಗೂ ವೀಕ್ಷಕರಾದ ಶೈಲಜಾ ಪ್ರಕರಣದ ತನಿಖೆ ನಡೆಸಿ ಆಯೋಗಕ್ಕೆ ವರದಿ ನೀಡಲಿದ್ದಾರೆ.
ಜಾಲಹಳ್ಳಿಯ ಎಸ್‍ಎಲ್‍ವಿ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾದ ಅಸಲಿ ಗುರುತಿನ ಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಂಡವು ತನಿಖೆ ನಡೆಸಿ ವರದಿ ನೀಡಿದೆ.
ಆರೋಪ ಪ್ರತ್ಯಾರೋಪ:
ಅಸಲಿ ಮತ್ತು ನಕಲಿ ಗುರುತಿನ ಚೀಟಿಗಳು ಪತ್ತೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದವು. ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರ ಕೈವಾಡದಿಂದಲೇ ಗುರುತಿನ ಚೀಟಿಗಳನ್ನು ಸಂಗ್ರಹಿಸಲಾಗಿದೆ ಮತ್ತು ನಕಲಿ ಮತದಾರರನ್ನು ಸೃಷ್ಠಿಸಲಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಆರೋಪಿಸಿವೆ. ಕೂಡಲೇ ಚುನಾವಣೆಯನ್ನು ಮುಂದೂಡಬೇಕು. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿವೆ.
ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಇಡೀ ಪ್ರಕರಣ ಬಿಜೆಪಿ ಷಡ್ಯಂತ್ರ. ವೋಟರ್ ಐಡಿ ಪತ್ತೆಯಾದ ಅಪಾರ್ಟ್‍ಮೆಂಟ್ ಬಿಜೆಪಿಯ ಮಂಜುಳಾ ನಂಜಮುರಿ ಎಂಬುವವರಿಗೆ ಸೇರಿದ್ದು. ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅವರ ಬಲಗೈ ಭಂಟ ರಾಕೇಶ್ ಎಂಬುವವರು ಫ್ಲಾಟ್ ಬಾಡಿಗೆಗೆ ಪಡೆದು ಅಕ್ರಮವಾಗಿ ವೋಟರ್ ಐಡಿ ಸಂಗ್ರಹಿಸಿ ಮುನಿರತ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.
*ಆದರೆ ಬಿಜೆಪಿ-ಜೆಡಿಎಸ್ ಆರೋಪಗಳನ್ನು ಆಧರಿಸಿ ಕಾಂಗ್ರೆಸ್ ಅಭ್ಯರ್ಥಿಯ ಸ್ಪರ್ಧೆಯನ್ನು ಏಕಾಏಕಿ ಅನರ್ಹಗೊಳಿಸುವುದು ಅಸಾಧ್ಯ. ಮತದಾರರ ಚೀಟಿಗಳು ಪತ್ತೆಯಾಗಿರುವುದು ನಿಜ. ಆದರೆ ಅವುಗಳ ಹಿಂದೆ ಯಾರ ಕೈವಾಡ ಇದೆ ಎಂಬುದು ತನಿಖೆಯ ನಂತರವಷ್ಟೇ ತಿರ್ಮಾನವಾಗಲು ಸಾಧ್ಯ. ಹಾಗಾಗಿ ತಕ್ಷಣಕ್ಕೆ ಯಾವ ಅಭ್ಯರ್ಥಿಯ ವಿರುದ್ಧವೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟ ಪಡಿಸಿವೆ.
ಆಯೋಗದ ತೀರ್ಮಾನವೇ ಅಂತಿಮ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಪಾರ್ಟ್‍ಮೆಂಟ್‍ನಲ್ಲಿ ಸಂಗ್ರಹವಾದ ವಸ್ತುಗಳನ್ನು ಪರಿಶೀಲಿಸಿ ಸಮಗ್ರ ವಿವರವನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಿದ್ದೇವೆ. ಆಯೋಗ ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ತಿಳಿಸಿದ್ದಾರೆ.
ಸಿಸಿಟಿವಿ ತಿರುಗಿಸಿದ್ದ ಕಿಲಾಡಿಗಳು:
ಇನ್ನು ಎಸ್‍ಎಲ್‍ವಿ ಅಪಾರ್ಟ್‍ಮೆಂಟ್‍ನಲ್ಲಿ ಕಿಲಾಡಿಗಳು ತಮ್ಮ ಗುರುತು ಪತ್ತೆಯಾಗಬಾರದೆಂಬ ಹಿನ್ನೆಲೆಯಲ್ಲಿ ಸಿಸಿಟಿವಿಯನ್ನು ಮನೆಯ ಎದುರು ದಿಕ್ಕಿಗೆ ತಿರುಗಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ರಾಕೇಶ್ ಪಾತ್ರ ಇನ್ನು ನಿಗೂಢವಾಗಿಯೇ ಉಳಿದಿದೆ. ಬಿಬಿಎಂಪಿ ಕಾಪೆರ್Çೀರೇಟ್‍ರೊಬ್ಬರ ದತ್ತು ಮಗ ಇವರೇ ಎನ್ನಲಾಗುತ್ತಿದೆ. ಆದರೆ ಇದನ್ನು ಅವರು ನಿರಾಕರಿಸಿದ್ದು, ಅನಗತ್ಯವಾಗಿ ಪ್ರಕರಣದಲ್ಲಿ ನನ್ನ ಹೆಸರನ್ನು ತಳಕು ಹಾಕಲಾಗುತ್ತಿದೆ ಎಂದು ದೂರಿದ್ದಾರೆ.
ತುರ್ತು ಸಭೆ: ರಾಜರಾಜೇಶ್ವರಿನಗರದಲ್ಲಿ ಪತ್ತೆಯಾದಂತೆ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲೂ ವೋಟರ್ ಐಡಿ ಪತ್ತೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಂಜೀವ್‍ಕುಮಾರ್ ಅವರು ಬಿಬಿಎಂಪಿ ವ್ಯಾಪ್ತಿಯ ಎಲ್ಲ ಚುನಾವಣಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸುತ್ತಿದ್ದಾರೆ.
ದೂರು: ಒಟ್ಟಾರೆ ವೋಟರ್ ಐಡಿ ಪತ್ತೆ ಪ್ರಕರಣದ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿವೆ.
ಕೇಂದ್ರ ಸಚಿವ ಅನಂತ್‍ಕುಮಾರ್ ಅವರು ಹಗರಣದ ರೂವಾರಿ ಮುನಿರತ್ನ ಅವರನ್ನು ಬಂಧಿಸಲೇಬೇಕು ಎಂದು ನೇರ ಆರೋಪ ಮಾಡಿದ್ದು, ಮತ್ತೊಬ್ಬ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಆರ್‍ಆರ್ ನಗರ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಕೂಡ ಪ್ರತಿದೂರು ನೀಡಿದ್ದು, ಇಡೀ ಹಗರಣದ ತನಿಖೆ ನಡೆಸಿ ಸತ್ಯಾಸತ್ಯತೆ ಪತ್ತೆಹಚ್ಚಿ ಬಿಜೆಪಿಯ ಬಂಡವಾಳ ಬಯಲು ಮಾಡಬೇಕು ಎಂದು ಒತ್ತಾಯಿಸಿದೆ.
ಒಟ್ಟಾರೆ ಆರ್‍ಆರ್ ನಗರ ಕ್ಷೇತ್ರದ ವಿಧಾನಸಭಾ ಚುನಾವಣೆ ಡೋಲಾಯಮಾನ ಪರಿಸ್ಥಿತಿ ತಲುಪಿದ್ದು, ಚುನಾವಣಾ ಆಯೋಗ ಯಾವ ತೀರ್ಮಾನ ಕೈಗೊಳ್ಳುವುದೋ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.
ಗೆಲ್ಲಲೇಬೇಕು ಎಂಬ ಕಾರಣದಿಂದ ರಾಜಕೀಯ ಪಕ್ಷಗಳು ಅಡ್ಡದಾರಿ ಹಿಡಿದಿರುವುದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರವಾಗಿದೆ.
ವ್ಯವಸ್ಥಿತ ಜಾಲ: ಚುನಾವಣೆ ಘೋಷಣೆಯಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿರುವ ಸಂದರ್ಭದಲ್ಲೇ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಕಲಿ ವೋಟರ್ ಐಡಿ ಸೃಷ್ಟಿಸಿ ಅಕ್ರಮವಾಗಿ 2 ಸಾವಿರಕ್ಕೂ ಹೆಚ್ಚು ಮಂದಿ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿತ್ತು.
ಈ ಕುರಿತಂತೆ ಜಿಲ್ಲಾಧಿಕಾರಿ ದಯಾನಂದ್ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಪೆÇಲೀಸರು ನಕಲಿ ವೋಟರ್ ಐಡಿ ಸೃಷ್ಟಿ ಜಾಲ ಭೇದಿಸಿ ಕೆಲ ಆರೋಪಿಗಳನ್ನು ಬಂಧಿಸಿದ್ದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವ್ಯವಸ್ಥಿತ ಜಾಲವೇ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ನಕಲಿ ವೋಟರ್ ಐಡಿ ಸೃಷ್ಟಿಸುತ್ತಿರುವ ಸಾಧ್ಯತೆ ಇದೆ ಎನ್ನಲಾಗಿದೆ.