ಮಂಗಳೂರು:ಮೇ-9; ಮುಖ್ಯಮಂತ್ರಿ ಸಿದ್ದರಾಮಯ್ಯ ಇರಲಿ, ಪ್ರಧಾನಿ ಮೋದಿ,.. ಯಾರೇ ಇರಲಿ ದುರಹಂಕಾರ ಬಿಡದೇ ಇದ್ದರೆ, ಅವರ ರಾಜಕೀಯ ಜೀವನ ಮುಗಿಯುತ್ತದೆ ಎಂದು ಜನಾರ್ದನ ಪೂಜಾರಿ ಸಲಹೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದೇನೆ. ಅವರು ಜನರ ಪರ ಕೆಲಸ ಮಾಡಿದ್ದಾರೆ. ಆದರೆ, ದುರಹಂಕಾರ ತೋರಿಸುತ್ತಿದ್ದಾರೆ. ತಪ್ಪನ್ನು ತಿದ್ದಿಕೊಳ್ಳದೇ ಹೋದರೆ, ಅವರು ರಾಜಕೀಯವಾಗಿ ಮುಂದುವರಿಯುವುದು ಸಾಧ್ಯವಿಲ್ಲ ಎಂದರು.
ಈ ಬಾರಿ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ತಪ್ಪು ಯಾರೇ ಮಾಡಲಿ ಅದನ್ನು ಹೇಳುವುದು ನನ್ನ ಧರ್ಮ ಎಂದು ಹೇಳಿದರು. ಪ್ರಧಾನಿ ಮೋದಿ, ಶಾ, ಯಾರೇ ಬರಲಿ ಕಾಂಗ್ರೆಸ್ ಅನ್ನು ಮುಗಿಸಲು ಸಾಧ್ಯವಿಲ್ಲ ಎಂದರು.
ಚಿದಂಬರಂ ಯಾರು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಬಿಜೆಪಿಯವರು ಚಿದಂಬರಂ ಬಗ್ಗೆ ಬಾಯಿ ಬಿಟ್ಟರೆ ಕಾಂಗ್ರೆಸ್ ಸರ್ವನಾಶ ಆಗಲಿದೆ ಎಂದು ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಹರೀಶಕುಮಾರ್ ಅರ್ಧಕ್ಕೆ ಎದ್ದು ಹೋದರು. ಇದನ್ನು ಗಮನಿಸಿದ ಪೂಜಾರಿ ಎಲ್ಲಿಗೆ ಹೋದರು ಎಂದು ಪ್ರಶ್ನಿಸಿದರು. ಅಲ್ಲಿಯೆ ಇದ್ದ ಮುಖಂಡರು, ಚಿದಂಬರಂ ಬಂದಿದ್ದಾರೆ. ಅವರ ಬಳಿಗೆ ಹೋಗಿದ್ದಾರೆ ಎಂದರು.
ಇದರಿಂದ ಸಿಡಿಮಿಡಿಗೊಂಡ ಜನಾರ್ದನ ಪೂಜಾರಿ, ನಿಮಗೆಲ್ಲ ಈ ನಾಯಕರನ್ನು ಮೆಚ್ಚಿಸುವುದರಲ್ಲಿಯೇ ಸಂತೋಷ. ನಾನೇನು ಕೆಲಸ ಇಲ್ಲದ್ದಕ್ಕೆ ಇಲ್ಲಿಗೆ ಬಂದಿದ್ದೀನಾ ಎಂದು ಖಾರವಾಗಿ ಪ್ರಶ್ನಿಸಿದರು.