ಆಮೀಷವೊಡ್ಡಿ ಉದ್ಯಮಿಯೊಬ್ಬರಿಗೆ 1.43 ಕೋಟಿ ರೂ. ವಂಚನೆ

ನವದೆಹಲಿ, ಮೇ 9-ಬಾಹ್ಯಾಕಾಶ ಸಂಶೋಧನೆಗಾಗಿ ರೈಸ್ ಪುಲ್ಲರ್ (ಧಾನ್ಯ ಸೆಳೆಯುವ ತಾಮ್ರ ಪಾತ್ರೆ) ಪರೀಕ್ಷೆ ಮತ್ತು ಮಾರಾಟ ಮಾಡಿದರೆ ಭರ್ಜರಿ ಲಾಭವಿದೆ ಎಂಬ ಆಮೀಷವೊಡ್ಡಿ ಉದ್ಯಮಿಯೊಬ್ಬರಿಗೆ 1.43 ಕೋಟಿ ರೂ.ಗಳನ್ನು ವಂಚಿಸಿದ್ದ ತಂದೆ ಮತ್ತು ಮಗನನ್ನು ದೆಹಲಿ ಪೆÇಲೀಸರು ಬಂಧಿಸಿದ್ದಾರೆ.
ನರೇಂದ್ರ ಎಂಬ ಉದ್ಯಮಿಗೆ 1.43 ಕೋಟಿ ರೂ.ಗಳ ನಾಮ ಹಾಕಿದ್ದ ವೀರೇಂದ್ರ ಮೋಹನ್ ಬ್ರಾರ್ ಮತ್ತು ಅವರ ಪುತ್ರ ನಿತೀನ್ ಮೋಹನ್ ಬ್ರಾರ್ ಅಲಿಯಾಸ್ ಬಾಬಾ ಬ್ರಾರ್ ಅವರನ್ನು ಬಂಧಿಸಲಾಗಿದೆ.
ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಹಾಗೂ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‍ಡಿಒ)-ಇವುಗಳ ಅಂತರಿಕ್ಷ ಸಂಶೋಧನೆಗಾಗಿ ತ್ರಾಮ ಪಾತ್ರೆಯ ರೈಸ್ ಪುಲ್ಲರ್ ಅಗತ್ಯವಿದೆ. ಇದನ್ನು ಗುಡುಗು-ಸಿಡಿಲು ನಿರೋಧಕದಿಂದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪ್ರಯೋಗ ಯಶಸ್ವಿಯಾದರೆ ಕೋಟ್ಯಂತರ ರೂ.ಗಳ ಲಾಭ ಲಭಿಸುತ್ತದೆ ಎಂದು ಗಾರ್ಮೆಂಟ್ ಉದ್ಯಮಿಗೆ ತಂದೆ ಮತ್ತು ಮಗ ಆಮೀಷವೊಡಿದ್ದರು.
ನಾಸಾ ಮತ್ತು ಡಿಆರ್‍ಡಿಒಗೆ ಸಾಕಷ್ಟು ಸಂಖ್ಯೆಯ ರೈಸ್ ಪುಲ್ಲರ್‍ಗಳು (ಅಕ್ಕಿಯಂಥ ಧಾನ್ಯಗಳನ್ನು ತನ್ನನ್ನ ಸೆಳೆಯುವ ಆಯಸ್ಕಾಂತೀಯ ಗುಣ ಹೊಂದಿರುವ ತಾಮ್ರ ಅಥವಾ ಹಿತ್ತಾಳೆ ಪಾತ್ರೆ. ಇದು ಉತ್ತರ ಭಾರತದ ಗ್ರಾಮಗಳಲ್ಲಿ ಕಂಡುಬರುತ್ತದೆ) ಬೇಕು. ಇದು ಒಟ್ಟು 37,500 ಕೋಟಿ ರೂ.ಗಳ ವ್ಯವಹಾರ ಎಂದು ಉದ್ಯಮಿಗೆ ನಂಬಿಸಿದ್ದರು.
ಆರಂಭದಲ್ಲಿ 10 ಕೋಟಿ ರೂ.ಗಳ ಮುಂಗಡ ಪಾವತಿಸುವುದಾಗಿ ಉದ್ಯಮಿಗೆ ಆಸೆ ಹುಟ್ಟಿಸಿ ಪ್ರಯೋಗಕ್ಕಾಗಿ ಹಿಮಾಚಲ ಪ್ರದೇಶ ಧರ್ಮಶಾಲಾ ಪ್ರದೇಶದಲ್ಲಿ ಘಟಕವೊಂದನ್ನು ಸ್ಥಾಪಿಸಬೇಕು. ಅಲ್ಲಿ ಬಾಹ್ಯಾಕಾಶ ಯಾತ್ರಿಗಳಂಥ ವಿಕಿರಣ ನಿರೋಧ ಉಡುಪುಗಳೂ ಸೇರಿದಂತೆ ಯಂತ್ರೋಪಕರಣಗಳು ಮತ್ತು ಸಾಧನ-ಸಲಕರಣೆಗಳಿಗೆ ಹಣದ ಅಗತ್ಯವಿದೆ ಎಂದು ಸೋಗು ಹಾಕಿ ಉದ್ಯಮಿ ನರೇಂದ್ರನಿಂದ ಪ್ರತ್ಯೇಕ ಸಂದರ್ಭಗಳಲ್ಲಿ 1.43 ಕೋಟಿ ರೂ.ಗಳನ್ನು ಕಿತ್ತಿದ್ದರು.  ಘಟಕ ಸ್ಥಾಪನೆ ವಿಳಂಬವಾದಾಗ ತಂದೆ ಮತ್ತು ಮಗ ಕುಂಟು ನೆಪಗಳನ್ನು ಒಡ್ಡಿ ಉದ್ಮಮಿಯನ್ನು ಸತಾಯಿಸಿದ್ದರು. ನಂತರ ಅತ್ಯಂತ ಕಳಪೆ ಮತ್ತು ನಕಲಿ ಅಂತರಿಕ್ಷ ಉಡುಪುಗಳು ಮತ್ತು ಸಾಧನಗಳನ್ನು ಖರೀದಿಸಿ ಅದನ್ನು ತೋರಿಸಿ ಉದ್ಯಮಿಯನ್ನು ಸುಮ್ಮನಾಗಿಸಲು ಯತ್ನಿಸಿದ್ದರು. ಆದರೆ ಈ ಯೋಜನೆ ಕೈಗೊಡದ ಹಿನ್ನೆಲೆಯಲ್ಲಿ ನರೇಂದ್ರ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅಪ್ಪ ಮತ್ತು ಮಗನನ್ನು ಬಂಧಿಸಿ ನಕಲಿ ಬಾಹ್ಯಾಕಾಶ ಉಡುಪುಗಳು ಮತ್ತು ಯಂತ್ರೋಪಕರಣಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ