ನವದೆಹಲಿ, ಮೇ 8-ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಮತ್ತು ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವಾಗಲೇ ಕಾಂಗ್ರೆಸ್ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ಕೆಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಕಣಿವೆ ರಾಜ್ಯದಲ್ಲಿ ಜನರ ಆಕ್ರೋಶಕ್ಕೆ ಸರ್ಕಾರ ಬಿಜೆಪಿ ಜೊತೆ ಅಪವಿತ್ರ ಮೈತ್ರಿ ಹೊಂದಿರುವುದೇ ಕಾರಣ ಎಂದು ಆರೋಪಿಸಿರುವ ಅವರು, ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ತೊರೆಯುವಂತೆ ಮೆಹಬೂಬಾ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವಿಟ್‍ಗಳನ್ನು ಮಾಡಿರುವ ಚಿದು, ಕೇಂದ್ರ ಸರ್ಕಾರದ ತೋಳ್ಬಲ ಮತ್ತು ಸೇನಾಬಲದ ಧೋರಣೆಯಿಂದಾಗಿ ಕಾಶ್ಮೀರದಲ್ಲಿ ಜನರು ರೋಸಿ ಹೋಗಿದ್ದಾರೆ. ಇಂದು ಕಣಿವೆ ರಾಜ್ಯದಲ್ಲಿ ತಲೆದೋರಿರುವ ಉದ್ರಿಕ್ತ ಪರಿಸ್ಥಿತಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಮೆಹಬೂಬಾ ಅವರು ಅಪವಿತ್ರ ಹಾಗೂ ಅವಕಾಶವಾದಿ ಬಿಜೆಪಿ ಸಮ್ಮಿಶ್ರ ಸರ್ಕಾರದಿಂದ ಹೊರಬರಬೇಕು. ಅವರ ತಂದೆ ಮುಫ್ತಿ ಮಹಮದ್ ಅನುಸರಿಸಿದ ಸಿದ್ಧಾಂತವನ್ನು ಪಾಲಿಸಬೇಕೆಂದು ಚಿದು ಸಲಹೆ ಮಾಡಿದ್ದಾರೆ.