ಬೆಂಗಳೂರು, ಮೇ 8-ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ, ಭಾರೀ ಬಹಿರಂಗ ಸಭೆ, ರೋಡ್‍ಶೋ, ಮನೆ ಮನೆ ಪ್ರಚಾರ, ನಾಯಕರುಗಳ ಯಾತ್ರೆ ಹಾಗೂ ಸಂವಾದ ಸೇರಿದಂತೆ ಎಲ್ಲಾ ಪಕ್ಷಗಳ ಕಾರ್ಯಕ್ರಮಗಳು ಬಹುತೇಕ ಈವರೆಗೆ ಶಾಂತಿಯುತವಾಗಿ ನಡೆದಿವೆ.
ಚುನಾವಣೆ ಅಧಿಸೂಚನೆ ಪ್ರಕಟವಾದ ನಂತರ ನಡೆದ ನಾಮಪತ್ರ ರ್ಯಾಲಿ, ವಿವಿಧ ಪಕ್ಷಗಳ ಶಕ್ತಿ ಪ್ರದರ್ಶನದ ಯಾತ್ರೆ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ವಿವಿಧ ಘೋಷವಾಕ್ಯಗಳೊಂದಿಗೆ ನಡೆಸುತ್ತಿರುವ ಚುನಾವಣಾ ಪ್ರಚಾರ, ಮುಂಬೈ-ಕರ್ನಾಟಕ, ಮಧ್ಯಕರ್ನಾಟಕ, ಉತ್ತರ ಕರ್ನಾಟಕ, ಹಳೇ ಮೈಸೂರು, ಕರಾವಳಿ ಸೇರಿದಂತೆ ರಾಜ್ಯದೆಲ್ಲೆಡೆ ನಡೆದ ರಾಜಕೀಯ ಪಕ್ಷಗಳ ಸಭೆ, ಸಮಾರಂಭಗಳು, ಯಾವುದೇ ಗೋಜು, ಗದ್ದಲಗಳಿಲ್ಲದೆ ನಡೆದಿರುವುದು ಅತ್ಯಂತ ವಿಶೇಷವಾಗಿದೆ.
ಚುನಾವಣಾ ಬಹಿರಂಗ ಪ್ರಚಾರಕ್ಕೆ ಕೇವಲ ಇನ್ನೆರಡು ದಿನ ಬಾಕಿ ಇದೆ. ರಾಜ್ಯಾದ್ಯಂತ ಯಾವುದೇ ಗಲಭೆ, ಗದ್ದಲಗಳು ನಡೆದಿಲ್ಲ. ಕೇವಲ ಮಾತಿನ ಚಕಮಕಿಗಳು, ವೈಯಕ್ತಿಕ ದಾಳಿಗಳನ್ನು ಹೊರತುಪಡಿಸಿದರೆ, ಎಲ್ಲಾ ಚುನಾವಣಾ ಪ್ರಚಾರ ಸಭೆಗಳು, ಎಲ್ಲಾ ಪಕ್ಷಗಳ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆದಿವೆ.
ಚುನಾವಣಾ ಆಯೋಗ ಅತ್ಯಂತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಚುನಾವಣಾ ದಿನಾಂಕ ಪ್ರಕಟವಾದ ದಿನದಿಂದಲೇ ಆಯೋಗ ಹದ್ದಿನ ಕಣ್ಣಿಟ್ಟಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶದಲ್ಲಿ ಸಂಭಾವ್ಯ ಗಲಭೆಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು.
ನಿರಂತರ ದಾಳಿ, ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲು ಈವರೆಗೂ ಆಸ್ಪದವಾಗಿಲ್ಲ. ಚುನಾವಣೆ ಎಂದರೆ ಜನರಲ್ಲಿ ಒಂದು ರೀತಿಯ ಆತಂಕದ ವಾತಾವರಣ ಸೃಷ್ಟಿಯಾಗುವಂತಹ ಸನ್ನಿವೇಶ ಎದುರಾಗುತ್ತಿತ್ತು.
ಎಲ್ಲಿ ಏನಾಗುತ್ತದೆಯೋ, ಯಾವ ಅನಾಹುತ ಸಂಭವಿಸುತ್ತದೆಯೋ ಎಂದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡುತ್ತಿತ್ತು. ಆದರೆ ಈ ಬಾರಿಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯಾವುದೇ ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಕಳೆದ ಏ.26ರಿಂದ ರಾಜ್ಯಾದ್ಯಂತ ಬಹುತೇಕ ಶಾಂತಿಯುತ ಚುನಾವಣಾ ಪ್ರಚಾರ ಕಾರ್ಯ ನಡೆಯುತ್ತಾ ಬಂದಿದೆ.
ರಾಜಧಾನಿ ಬೆಂಗಳೂರಿನಿಂದ ಹಿಡಿದು ಕಟ್ಟಕಡೆಯ ಹಳ್ಳಿಯವರೆಗೆ ಯಾವುದೇ ಗಲಾಟೆ, ಗದ್ದಲ, ಗಲಭೆಗಳಾಗಿರುವ ಸನ್ನಿವೇಶಗಳು ವರದಿಯಾಗಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರ 21ಕ್ಕೂ ಹೆಚ್ಚು ಬಹಿರಂಗ ಸಮಾವೇಶಗಳು ರಾಜ್ಯದಲ್ಲಿ ನಡೆದವು. ರಾಹುಲ್‍ಗಾಂಧಿ, ಸೋನಿಯಾಗಾಂಧಿ, ಅಮಿತ್ ಷಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥ್, ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ರ್ಯಾಲಿ, ಸಮಾವೇಶ, ಬಹಿರಂಗ ಸಭೆ, ಸಂವಾದ ಕಾರ್ಯಕ್ರಮಗಳು ಚುನಾವಣೆ ಅಂಗವಾಗಿ ನಡೆದವಾದರೂ ಎಲ್ಲವೂ ಬಹುತೇಕ ಶಾಂತಿಯುತವಾಗಿದ್ದವು.
ರಾಜಕೀಯ ನಾಯಕರ ಪರಸ್ಪರ ಆರೋಪ, ಪ್ರತ್ಯಾರೋಪಗಳನ್ನು ಹೊರತುಪಡಿಸಿದರೆ, ಇನ್ಯಾವುದೇ ಕಹಿ ಘಟನೆಗಳು ರಾಜ್ಯದಲ್ಲಿ ಈವರೆಗೆ ಜರುಗಿಲ್ಲ.
ಆಯೋಗದ ಕಟ್ಟುನಿಟ್ಟಿನ ಕ್ರಮ:
ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಕಾನೂನು ಸುವ್ಯವಸ್ಥೆಯನ್ನು ದಿನದ 24 ಗಂಟೆ ಕಾಪಾಡುತ್ತಿದ್ದಾರೆ. ಹಾಗಾಗಿ ಎಲ್ಲೂ ಏನೂ ನಡೆದಿಲ್ಲ.
ಒಟ್ಟಾರೆಯಾಗಿ ಫ್ಲೈಯಿಂಗ್ ಸ್ಕ್ವಾಡ್‍ಗಳ ತಂಡ, ಎಸ್‍ಎಸ್‍ಟಿ ಮತ್ತು ಇತರ ಪೆÇಲೀಸ್ ಪ್ರಾಧಿಕಾರಗಳ ತಂಡ ಈವರೆಗೆ ವಿವಿಧೆಡೆ ಕಾರ್ಯಾಚರಣೆ ನಡೆಸಿ 54.46 ಕೋಟಿಯಷ್ಟು ಹಣ ವಶಪಡಿಸಿಕೊಂಡಿದೆ.
ಫ್ಲೈಯಿಂಗ್ ಸ್ಕ್ವಾಡ್‍ಗಳು 924 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿವೆ. ಅಬಕಾರಿ ಇಲಾಖೆಯು 23.90 ಕೋಟಿ ಮೌಲ್ಯದ ಐಎಂಎಲ್ ಹಾಗೂ ಇತರೆ ಮದ್ಯ ಸೇರಿ 5,15,903 ಗಳಷ್ಟು ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ. ಒಟ್ಟಾರೆ 7539 ಪ್ರಕರಣಗಳನ್ನು ದಾಖಲಿಸಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 23,447 ವ್ಯಕ್ತಿಗಳಿಂದ ಮುಚ್ಚಳಿಕೆ ಪಡೆಯಲಾಗಿದೆ. 38,456 ಜಾಮೀನು ರಹಿತ ವಾರೆಂಟ್‍ಗಳನ್ನು ಚುನಾವಣೆ ಘೋಷಣೆಯಾದ ದಿನಾಂಕದಿಂದ ಈವರೆಗೆ ಹೊರಡಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರ ಸ್ವಯಂ ಜಾಗೃತಿ:
ಜನರೂ ಕೂಡ ಜಾಗೃತರಾಗಿದ್ದಾರೆ. ಯಾಕಪ್ಪಾ ಬೇಕು ಈ ಉಸಾಬರಿ. ನಾವು ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಿದರೆ ಸಾಕು, ನಮಗೇಕೆ ಬೇಕು ಗಲಾಟೆ ಎಂದು ಜನರೂ ಕೂಡ ಎಚ್ಚೆತ್ತಿರುವ ಕಾರಣ ಯಾವುದೇ ಅಹಿತಕರ ಘಟನೆಗಳು ನಡೆಯುತ್ತಿಲ್ಲ.