ರಾಜಧಾನಿ ದೆಹಲಿಗೆ ಚಂಡಮಾರುತ ಜನಜೀವನ ಅಸ್ತವ್ಯಸ್ತ:

ನವದೆಹಲಿ, ಮೇ 8-ನಿರೀಕ್ಷೆಯಂತೆ ರಾಜಧಾನಿ ದೆಹಲಿಗೆ ಚಂಡಮಾರುತ ಅಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದೇ ವೇಳೆ ಕರ್ನಾಟಕ ಸೇರಿದಂತೆ ದೇಶದ 20 ರಾಜ್ಯಗಳಲ್ಲೂ ಚಂಡಮಾರುತದ ಕಟ್ಟೆಚ್ಚರ ಘೋಷಿಸಲಾಗಿದೆ. ದೆಹಲಿಗೆ ನಿನ್ನೆ ಮಧ್ಯರಾತ್ರಿ ಚಂಡಮಾರುತ ಅಪ್ಪಳಿಸಿದೆ. ದೆಹಲಿ, ಪಂಜಾಬ್, ರಾಜಸ್ತಾನ ಹಾಗು ಉತ್ತರಾಖಂಡದಲ್ಲೂ ಭಾರೀ ಮಳೆಯಾಗಿದ್ದು ಪ್ರವಾಸಿಗರೂ ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ. ದೆಹಲಿಯಲ್ಲಿ ಗಂಟೆಗೆ 90 ಕಿ.ಮೀ. ವೇಗದ ಚಂಡಮಾರುತ ಪ್ರಕೋಪದಿಂದಾಗಿ ದೆಹಲಿ ಮೆಟ್ರೋ ಸಂಚಾರ ತೀವ್ರ ಅಸ್ತವ್ಯಸ್ಥವಾಗಿದೆ. ಇದೇ ವೇಳೆ ಪಂಜಾಬ್‍ನ ಚಂಡಿಗಢ ಸೇರಿದಂತೆ ಕೆಲವು ಭಾಗಗಳು, ರಾಜಸ್ತಾನದ ಅಜ್ಮೀರ್ ಒಳಗೊಂಡಂತೆ ಹಲವೆಡೆ ಧೂಳಿನಿಂದ ಕೂಡಿದ ಮಳೆಯಾಗಿದೆ.
ಅತ್ತ ದೆಹಲಿಯಲ್ಲಿ ಚಂಡಮಾರುತ ಅಪ್ಪಳಿಸುತ್ತಿದ್ದಂತೆಯೇ ಹಮಾಮಾನ ಇಲಾಖೆದ 20 ರಾಜ್ಯಗಳಲ್ಲಿ ಹೈ-ಅಲರ್ಟ್ ಘೋಷಿಸಿದೆ. ಪಂಜಾಬ್, ಹರಿಯಾಣ, ಚಂಡಿಗಢ, ಬಿಹಾರ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಉತ್ತರ ಪ್ರದೇಶ, ಜಾರ್ಖಂಡ್, ಸಿಕ್ಕಿಂ, ಒಡಿಶಾ, ತೆಲಂಗಾಣ, ಉತ್ತರ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಉಳಿದಂತೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಬುಧವಾರದವರೆಗೂ ಈ ಎಲ್ಲ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ