ಬೆಂಗಳೂರು, ಮೇ 8- ಮುಖ್ಯಮಂತ್ರಿ ಅವರ ದುಬಾರಿ ವಾಚ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಮತ್ತು ಈ ಪ್ರಕರಣವನ್ನು ತುರ್ತು ವಿಚಾರಣೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಜೂನ್ಗೆ ಮುಂದೂಡಿದೆ.
ಲಕ್ಷಾಂತರ ಮೌಲ್ಯದ ದುಬಾರಿ ವಾಚ್ ಧರಿಸಿದ್ದ ಸಿದ್ದರಾಮಯ್ಯ ಅವರು ಇದನ್ನು ಉದ್ಯಮಿಯೊಬ್ಬರಿಂದ ಗಿಪ್ಟ್ ಪಡೆದಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಮಾಜಿ ಡಿವೈಎಸ್ಪಿ ಅನುಪಮಾ ಶಣೈ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ರಜಾಕಾಲದ ಪೀಠ ತುರ್ತು ವಿಚಾರಣೆಯ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು ಜೂನ್ಗೆ ಮುಂದೂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೂಬ್ಲೆಟ್ ದುಬಾರಿ ವಾಚ್ ಧರಿಸಿದ್ದ ಪ್ರಕರಣ ರಾಜ್ಯ ಹಾಗೂ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಸ್ನೇಹಿತರೊಬ್ಬರು ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಿ ಸದನದಲ್ಲಿ ಅದನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದರು.
ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಅನುಪಮಾ ಶಣೈ ಅವರು ನ್ಯಾಯಾಂಗದ ಮೆಟ್ಟಿಲೇರಿದ್ದಾರೆ.
ತುರ್ತು ವಿಚಾರಣೆ ನಡೆಸಬೇಕೆಂದು ಕೂಡ ಕೋರಿದ್ದರು. ಆದರೆ, ಇವರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ. ವಿಚಾರಣೆಯನ್ನು ಜೂನ್ಗೆ ಮುಂದೂಡಿದೆ.