ಬೆಂಗಳೂರು, ಮೇ 8- ಅಬಕಾರಿ ಇಲಾಖೆ ವರ್ಗಾವಣೆ ಕಮಿಷನ್ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪುತ್ರ ಯತೀಂದ್ರ, ಸಚಿವ ಕೆ.ಜೆ.ಜಾರ್ಜ್, ಅವರ ಪುತ್ರ ರಾಣಾಜಾರ್ಜ್, ಎಚ್.ವೈ.ಮೇಟಿ, ಐಎಎಸ್ ಅಧಿಕಾರಿ ಶೇಖರಪ್ಪ ಹಾಗೂ ಪ್ರಥಮ ದರ್ಜೆ ಗುಮಾಸ್ತ ಜೆ.ಮಂಜುನಾಥ್ ವಿರುದ್ಧ ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಎಸಿಬಿಗೆ ದೂರು ನೀಡಿದ್ದಾರೆ.
ಅಬಕಾರಿ ಇಲಾಖೆ ವರ್ಗಾವಣೆಯಲ್ಲಿ ಕಮಿಷನ್ ಪಡೆಯುವ ಕುರಿತಂತೆ ಅಪರ ಕಾರ್ಯದರ್ಶಿ ಶೇಖರಪ್ಪ ಹಾಗೂ ಎಫ್ಡಿಸಿ ಜೆ.ಮಂಜುನಾಥ್ ಅವರ ಆಡಿಯೋ ಸಂಭಾಷಣೆ ಕುರಿತ ದಾಖಲೆ ಸಮೇತ ಎನ್.ಆರ್.ರಮೇಶ್ ಎಸಿಬಿಗೆ ದೂರು ನೀಡಿದ್ದಾರೆ.
ಒಬ್ಬ ಅಧಿಕಾರಿ ವರ್ಗಾವಣೆಗೆ 15 ಲಕ್ಷ ಲಂಚ ಪಡೆದಿರುವುದಾಗಿ ದೂರವಾಣಿ ಸಂಭಾಷಣೆಯಲ್ಲಿ ಜೆ.ಮಂಜುನಾಥ್ ಬಾಯ್ಬಿಟ್ಟಿದ್ದು, ಮುಖ್ಯಮಂತ್ರಿಗಳಿಗೆ ಕಮಿಷನ್ ನೀಡುವ ವಿಚಾರವನ್ನು ಪ್ರಸ್ತಾಪ ಮಾಡಿರುವುದರಿಂದ ಕಾಂಗ್ರೆಸ್ ಸರ್ಕಾರ ಕಮಿಷನ್ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ಎನ್.ಆರ್.ರಮೇಶ್ ಸುದ್ದಿಗಾರರಿಗೆ ತಿಳಿಸಿದರು.
ಮಂಜುನಾಥ್ ಪಶು ಸಂಗೋಪನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದು, ಈತ ಮುಖ್ಯಮಂತ್ರಿಗಳ ಜತೆಗಿರುವ ಫೆÇೀಟೋಗಳನ್ನು ತೋರಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾನೆಂದು ಅವರು ಆರೋಪಿಸಿದರು.
ಐಎಎಸ್ ಅಧಿಕಾರಿ ಶೇಖರಪ್ಪ ಅವರೊಂದಿಗೆ ಜೆ.ಮಂಜುನಾಥ್ ಅಬಕಾರಿ ಇಲಾಖೆ ವರ್ಗಾವಣೆ ಕುರಿತಂತೆ ಮಾತನಾಡಿರುವ ಆಡಿಯೋ ಟೇಪ್ ಸಿಕ್ಕಿದ್ದು, ಇದನ್ನೇ ಸಾಕ್ಷಿಯಾಗಿ ಪರಿಗಣಿಸುವಂತೆ ಹಾಗೂ ಕಮಿಷನ್ ಪಡೆದಿದ್ದಾರೆ ಎನ್ನಲಾದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ವರ್ಗಾವಣೆ ದಂಧೆಯಲ್ಲಿ ಪಾಲ್ಗೊಂಡಿದ್ದ ಎನ್ನಲಾದ ಜೆ.ಮಂಜುನಾಥ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ನಂತರ ಆತನನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ ಎಂದು ರಮೇಶ್ ವಿವರಿಸಿದರು.