ಬೆಂಗಳೂರು,ಮೇ 8-ಕಳೆದ ಹಲವು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಅಧಿಕಾರದ ಉನ್ನತ ಸ್ಥಾನಕ್ಕೇರಿದ್ದ ಹಲವರಿಗೆ ಇದು ಕೊನೆಯ ಚುನಾವಣೆ.
ರಾಜಕಾರಣದಲ್ಲಿ ಇನ್ನು ಮುಂದುವರೆಯಬೇಕೆಂಬ ಹಪಾಹಪಿ ಇವರಿಗೆ ಇದ್ದರೂ ವಯಸ್ಸು , ಆರೋಗ್ಯ ಕೇಳುತ್ತಿಲ್ಲ. ವಿಧಿಯಿಲ್ಲದೆ ಒಲ್ಲದ ಮನಸ್ಸಿನಿಂದಲೇ ಮುಂದಿನ ಜನಾಂಗಕ್ಕೆ ಬಿಟ್ಟುಕೊಡಬೇಕಾದ ಅನಿವಾರ್ಯತೆ ಇದೆ.
ಕರ್ನಾಟಕದ ಮಟ್ಟಿಗೆ ಅತ್ಯಂತ ಹಿರಿಯ ರಾಜಕಾರಣಿಗಳಲ್ಲಿ ಮೊದಲ ಹೆಸರೇ ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅಲಿಯಾಸ್ ಎಸ್.ಎಂ.ಕೃಷ್ಣ. ನಂತರ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಬಿ.ಎಸ್.ಯಡಿಯೂರಪ್ಪ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದು ಬಹುತೇಕ ಕೊನೆಯ ಚುನಾವಣೆ.
ಇವರಲ್ಲಿ ಎಂ.ಮಲ್ಲಿಕಾರ್ಜುನ ಖರ್ಗೆ 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮತ್ತೊಂದು ಬಾರಿ ಸ್ಪರ್ಧಿಸುವ ಸಾಧ್ಯತೆ ಇದೆ. ಇನ್ನು ಎಚ್.ಡಿ.ದೇವೇಗೌಡರು ಈಗಾಗಲೇ ಇದು ನನ್ನ ಕಡೆಯ ಚುನಾವಣೆ ಎಂದು ಘೋಷಿಸಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ತಮ್ಮ ವಂಶದ ಮೂರನೇ ಕುಡಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣಗೆ ವೇದಿಕೆ ಸಜ್ಜುಗೊಳಿಸಿದ್ದಾರೆ. ಉಳಿದಂತೆ ಯಡಿಯೂರಪ್ಪ , ಸಿದ್ಧರಾಮಯ್ಯ ನನ್ನ ಕಡೆಯ ಚುನಾವಣೆ ಎಂದು ಹೇಳಿದ್ದಾರೆ.
ಎಸ್.ಎಂ.ಕೃಷ್ಣ ಮಾತ್ರ ರಾಜಕೀಯ ನಿವೃತ್ತಿ ಘೋಷಣೆ ಮಾಡಿಲ್ಲವಾದರೂ ಸದ್ಯದ ಪರಿಸ್ಥಿತಿಯಲ್ಲಿ ಅವರು ತೆರೆಮರೆಗೆ ಸರಿದಿದ್ದಾರೆ. ಈ ಐವರು ರಾಜಕಾರಣಿಗಳು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ, ವರ್ಚಸ್ಸು ಹೊಂದಿದವರು.
ರಾಜಕೀಯ ಎಂಬ ರಣರಂಗಕ್ಕೆ ಒಂದು ಬಾರಿ ಪ್ರವೇಶ ಮಾಡಿದರೆ ಮುಗಿಯಿತು. ಜನರು ಒಪ್ಪಲಿ ಬಿಡಲಿ ಮುಂದುವರೆಯಬೇಕೆಂಬ ಹಪಾಹಪಿ ಎಲ್ಲರಲ್ಲೂ ಇದ್ದೇ ಇರುತ್ತದೆ.
ಈ ಬಾರಿ ಕೊನೆ ಚುನಾವಣೆ ಎದುರಿಸುತ್ತಿರುವ ರಾಜಕಾರಣಿಗಳ ರಾಜಕೀಯ ಏಳುಬೀಳುಗಳು ಇಂತಿವೆ.
ಎಸ್.ಎಂ.ಕೃಷ್ಣ :
ಮೆಲು ಮಾತು, ಗಾಂಭೀರ್ಯತೆ, ತೀಕ್ಷ್ಣ ಮಾತುಗಳಿಂದ ಎದುರಾಳಿಗಳನ್ನು ಕಟ್ಟಿ ಹಾಕುತ್ತಿದ್ದ ಎಸ್.ಎಂ.ಕೃಷ್ಣ ಅವರಿಗೆ ಇದು ಕೊನೆಯ ಚುನಾವಣೆ. ರಾಜ್ಯಪಾಲರ ಹುದ್ದೆಯಿಂದ ಹಿಡಿದು ಕೇಂದ್ರದ ವಿದೇಶಾಂಗ ಸಚಿವ ಮುಖ್ಯಮಂತ್ರಿ ಸೇರಿದಂತೆ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದ ಈ ಹಿರಿಯ ಮುತ್ಸದ್ಧಿ ರಾಜಕೀಯ ನಿವೃತ್ತಿಯ ಅಂಚಿನಲ್ಲಿದ್ದಾರೆ.
ಸುಮಾರು ಐದೂವರೆ ದಶಕಗಳ ಕಾಲ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣವನ್ನು ತಮ್ಮ ಅಂಗೈನ ಗೆರೆಗಳಷ್ಟೇ ಅರಿತಿರುವ ಕೃಷ್ಣ ಒಂದು ಬಾರಿ ದೇಶದಲ್ಲೇ ನಂ.1 ಮುಖ್ಯಮಂತ್ರಿ ಎಂಬ ಕೀರ್ತಿಗೂ ಪಾತ್ರರಾಗಿದ್ದರು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರೂ ನಿವೃತ್ತಿ ಘೋಷಣೆ ಮಾಡುವುದಷ್ಟೇ ಬಾಕಿಯಿದೆ.
ಎಚ್.ಡಿ.ದೇವೇಗೌಡ:
ಹೋರಾಟಕ್ಕೆ ಇನ್ನೊಂದು ಹೆಸರೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. ಓರ್ವ ರೈತನ ಮಗನಾಗಿ ದೇಶದ ಅತ್ಯುನ್ನತ ಹುದ್ದೆಯಾದ ಪ್ರಧಾನಿಮಂತ್ರಿ ಸ್ಥಾನಕ್ಕೇರಿದ ಮೊದಲ ಕನ್ನಡಿಗ. ಸುಮಾರು 55 ವರ್ಷಗಳ ಕಾಲ ಸುದೀರ್ಘ ರಾಜಕಾರಣದ ಅನುಭವ ಹೊಂದಿರುವ ಗೌಡರು ಯುವ ಪೀಳಿಗೆಗೆ ಒಂದು ರಾಜಕೀಯ ವಿಶ್ವವಿದ್ಯಾನಿಲಯವಿದ್ದಂತೆ.
ತಮ್ಮ ಜೀವನುದ್ದಕ್ಕೂ ಹೋರಾಟವನ್ನೇ ಮಾಡಿಕೊಂಡು ಬಂದಿರುವ ಅವರು, ಅಧಿಕಾರ ಅನುಭವಿಸಿದ್ದಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತ್ತಿದ್ದೇ ಹೆಚ್ಚು. ಅಧಿಕಾರ ಇರಲಿ ಇಲ್ಲದಿರಲಿ ಎಂದಿಗೂ ಕೈ ಕಟ್ಟಿ ಕುಳಿತವರಲ್ಲ. ಇದೀಗ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಮಾಡು ಇಲ್ಲವೇ ಮಡಿ ಎಂಬಂತೆ ಅಖಾಡಕ್ಕಿಳಿದಿರುವ ಗೌಡರು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶಪಥ ಮಾಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ:
ದೇವೇಗೌಡರಂತೆ ಕರ್ನಾಟಕವನ್ನು ತನ್ನ ಅಂಗೈನಷ್ಟೇ ಬಲ್ಲ ಮತ್ತೊಬ್ಬ ರಾಜಕಾರಣಿ ಎಂದರೆ ಅದು ಬಿ.ಎಸ್.ಯಡಿಯೂರಪ್ಪ . ಹುಟ್ಟಿದ್ದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಬೂಕನಕೆರೆ. ಆದರೆ ರಾಜಕೀಯ ಜೀವನ ಆರಂಭಿಸಿದ್ದೇ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ.
ಶಿಕಾರಿಪುರದಲ್ಲಿ ಪುರಸಭೆ ಸದಸ್ಯರಾಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಅಲಂಕರಿಸಿದ ಯಡಿಯೂರಪ್ಪ ಎರಡು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದವರು.
ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಪಕ್ಷದೊಳಗೆ ಯಾವುದೇ ಸ್ಥಾನಮಾನ ನೀಡುವುದಿಲ್ಲ ಎಂಬ ಅಲಿಖಿತ ನಿಯಮವಿದೆ. ಆದರೆ ಈ ನಿಯಮ ಮಾತ್ರ ಯಡಿಯೂರಪ್ಪ ಮಾತ್ರ ಅನ್ವಯವಾಗುತ್ತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಹೈಕಮಾಂಡ್ ಘೋಷಿಸಿದೆ.
ಈ ಚುನಾವಣೆ ಬಹುತೇಕ ಕೊನೆಯ ಚುನಾವಣೆಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
ಎಂ.ಮಲ್ಲಿಕಾರ್ಜುನ ಖರ್ಗೆ:
ಸೋಲಿಲ್ಲದ ಸರದಾರನೆಂದೇ ಕರ್ನಾಟಕದ ಮಟ್ಟಿಗೆ ಕರೆಯುವ ರಾಜಕಾರಣಿ ಎಂದರೆ ಎಂ.ಮಲ್ಲಿಕಾರ್ಜುನ ಖರ್ಗೆ. ನಂಬಿದ ತತ್ವ ಸಿದ್ದಾಂತಕ್ಕೆ ಬದ್ಧರಾಗಿರುವ ಅವರು ಸತತ ಒಂಭತ್ತು ಬಾರಿ ಒಂದೇ ಕ್ಷೇತ್ರದಿಂದ ಗೆದ್ದು ದಾಖಲೆ ಬರೆದಿದ್ದಾರೆ. ನಾಲ್ಕೂವರೆ ದಶಕಗಳ ಕಾಲ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣವನ್ನು ಅರಿತಿರುವ ಖರ್ಗೆಗೆ ಇದು ಕೊನೆಯ ಚುನಾವಣೆ.
ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಎಲ್ಲ ಅರ್ಹತೆಗಳಿದ್ದರೂ ನಂಬಿದ ಪಕ್ಷಕ್ಕೆ ಎಂದೂ ದ್ರೋಹ ಮಾಡಿದವರಲ್ಲ. ಕಾಂಗ್ರೆಸ್‍ನಿಂದಲೇ ರಾಜಕಾರಣ ಆರಂಭಿಸಿರುವ ಅವರಿಗೆ ಇದು ಬಹುತೇಕ ಕೊನೆಯ ಚುನಾವಣೆ.
ಸಿದ್ದರಾಮಯ್ಯ:
ಒಂದು ಕಾಲದಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನ ನೀಡಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ಪಕ್ಷ ಬಿಡುವ ಚಿಂತನೆಯಲ್ಲಿದ್ದ ಹಾಲಿ ಮುಖ್ಯಮಂತ್ರಿಗೂ ಇದು ಕೊನೆಯ ಚುನಾವಣೆ. ಈ ಹಿಂದೆ 2013ರಲ್ಲೇ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರು.
ಬದಲಾದ ಪರಿಸ್ಥಿತಿಯಲ್ಲಿ ಸಿದ್ಧರಾಮಯ್ಯ ಅವರು ಈ ಬಾರಿ ಎರಡು ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 2014ರ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ದೇಶದಲ್ಲಿ ಸೋತು ಸುಣ್ಣವಾಗಿದೆ. ಈಗ ಸದ್ಯದ ಮಟ್ಟಿಗೆ ಕಾಂಗ್ರೆಸ್‍ಗೆ ಸಿದ್ಧರಾಮಯ್ಯನವರೇ ಟಾನಿಕ್. ಕಳೆದ ಐದು ವರ್ಷಗಳ ಅವಧಿಯಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದರೂ ಎರಡನೇ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗುವ ತವಕದಲ್ಲಿದ್ದಾರೆ.
ಒಂದು ವೇಳೆ ಎಲ್ಲ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಸ್ಸಂದೇಹವಾಗಿ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಒಂದು ವೇಳೆ ಕಾಂಗ್ರೆಸ್ ಸೋತರೆ ಇಲ್ಲವೇ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಸಿದ್ಧರಾಮಯ್ಯನವರೇ ರಾಜಕೀಯ ಪರಿಸ್ಥಿತಿಯೂ ಅತಂತ್ರವಾಗುವುದರಲ್ಲಿ ಸಂಶಯವಿಲ್ಲ.