ಬಹಿರಂಗ ಪ್ರಚಾರಕ್ಕೆ ಕೇವಲ ಎರಡು ದಿನ ಬಾಕಿ

ಬೆಂಗಳೂರು, ಮೇ 8-ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೇವಲ ಎರಡು ದಿನ ಬಾಕಿ ಇದೆ. ಪ್ರಚಾರದ ಅಬ್ಬರ ತಾರಕಕ್ಕೇರಿದೆ.
ಪ್ರಧಾನಿ ನರೇಂದ್ರ ಮೋದಿ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಘಟಾನುಘಟಿಗಳು ಅಬ್ಬರದ ಪ್ರಚಾರ ನಡೆಸಿದರು.
ಮುಂಬೈ-ಕರ್ನಾಟಕ ಭಾಗದಲ್ಲಿ ಪ್ರಧಾನಿ ಮೋದಿ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಬಹಿರಂಗ ಸಭೆಗಳು ನಡೆದರೆ ಇತ್ತ ಬೆಂಗಳೂರಿನಲ್ಲಿ ರಾಹುಲ್-ಮೋದಿ ಪ್ರಚಾರ ಕಾರ್ಯಕ್ರಮಗಳು ನಡೆದವು. ಅಮಿತ್‍ಷಾ ಮಡಿಕೇರಿ, ಮಂಗಳೂರಿನಲ್ಲಿ ರೋಡ್‍ಶೋ ರ್ಯಾಲಿ ನಡೆಸಿದರೆ, ಮಾಜಿ ಪ್ರಧಾನಿ ದೇವೇಗೌಡರು ಮೈಸೂರು, ಹಾಸನದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಒಟ್ಟಾರೆ ಮಂಗಳವಾರವಾದ ಇಂದು ಹೈವೋಲ್ಟೇಜ್ ಪ್ರಚಾರದ ದಿನವಾಗಿತ್ತು.

ನಾಡಿನ ಮತದಾರರ ಮನಸೆಳೆಯಲು ಭಾರೀ ಕಸರತ್ತನ್ನೇ ಮಾಡಿದರು. ಬೆಂಗಳೂರು, ಮೈಸೂರು, ವಿಜಯಪುರ, ಮಡಿಕೇರಿ, ಧಾರವಾಡ ಎಲ್ಲೆಡೆ ನಾಯಕರ ಪ್ರಚಾರದ ಅಬ್ಬರ ಬಿರುಸಾಗಿತ್ತು.
ಪ್ರಧಾನಿ ಮೋದಿಯವರು ವಿಜಯಪುರ, ಕೊಪ್ಪಳ, ಬೆಂಗಳೂರಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು. ಭಾರೀ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು.

ವಿಜಯಪುರದಲ್ಲಿ ಏರ್ಪಡಿಸಿದ್ದ ಭಾರೀ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಭಾರೀ ಚರ್ಚೆಗೆ ಗ್ರಾಸವಾಗಿದ್ದ ರಾಹುಲ್‍ಗಾಂಧಿಯವರು ತಪ್ಪು ತಪ್ಪಾಗಿ ಹೇಳಿದ್ದ ಇವನಾರವ ಇವನಾರವ… ಬಸವಣ್ಣನವರ ವಚನವನ್ನು ಸ್ಪಷ್ಟವಾಗಿ ಹೇಳಿ ಜನರ ಮನಗೆದ್ದರು.
ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂದು ಎಸಿ ರೂಮಿನಲ್ಲಿ ಕುಳಿತವರು ಹೇಳುತ್ತಿದ್ದಾರೆ. ಆದರೆ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲಿದೆ ಎಂದು ರಾಜ್ಯದ ಜನ ಹೇಳುತ್ತಿದ್ದಾರೆ ಎಂದು ಹೇಳಿದರು.

ರಾಜ್ಯಸರ್ಕಾರದ ವಿರುದ್ಧ, ಮಂತ್ರಿಗಳ ಕಾರ್ಯವೈಖರಿ ವಿರುದ್ಧ ಹರಿಹಾಯ್ದ ಅವರು, ಎಲ್ಲಾ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪವಿದೆ ಎಂದರು.
ನೀರಾವರಿ ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಸವಣ್ಣನವರನ್ನು ವಿಶ್ವಮಾನ್ಯ ಗೊಳಿಸಿದ್ದು ಬಿಜೆಪಿ. ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಅಳವಡಿಸಿದ್ದು, ವಾಜಪೇಯಿ ಸರ್ಕಾರ ಎಂದು ಕಾಂಗ್ರೆಸ್‍ನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ತಮ್ಮ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು.

ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿಯವರು ವಿಜಯಪುರದ ಬಿಎಲ್‍ಡಿಇ ಹೊಸ ಕ್ಯಾಂಪಸ್‍ನಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ದೇಶದ ಉಳಿವಿಗೆ ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ ಜನಪರ ಯೋಜನೆಗಳನ್ನು ಜನರ ಮುಂದಿಟ್ಟರು. ಮೋದಿಯವರು ಯಾವುದೇ ಭರವಸೆಗಳನ್ನು ಈಡೇರಿಸುತ್ತಿಲ್ಲ ಎಂಬ ಆರೋಪ ಮಾಡಿದರು.

ಇತ್ತ ಮೈಸೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವಿರುದ್ಧ ಹರಿಹಾಯ್ದು ಎರಡೂ ರಾಷ್ಟ್ರೀಯ ಪಕ್ಷಗಳು ಜನತೆಗೆ ಮೋಸ ಮಾಡುತ್ತಿವೆ. ನಾವು ಕಿಂಗ್ ಮೇಕರ್ ಅಲ್ಲ, ನಾವೇ ಕಿಂಗ್ ಆಗುತ್ತೇವೆ. 15ರ ಫಲಿತಾಂಶ ಏನಾಗುತ್ತದೆ ಎಂಬುದನ್ನು ಕಾದುನೋಡಿ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಎಂದಿನಂತೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹರಿಹಾಯ್ದರು.

2019ಕ್ಕೆ ಬಿಜೆಪಿ ಬಹುಮತ ಕಳೆದುಕೊಳ್ಳಲಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯಲಿದೆ. ನಾನು ಪ್ರಧಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ನನ್ನ ಭವಿಷ್ಯ ಅಡಗಿದೆ.ಕಾಂಗ್ರೆಸ್‍ಗೆ ಎಲ್ಲರೂ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಮಡಿಕೇರಿ ಹಾಗೂ ಮಂಗಳೂರಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ರ್ಯಾಲಿ ನಡೆಸಿದರು. ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಅವರು, ಬಿಜೆಪಿ ಬೆಂಬಲಿಸುವಂತೆÉ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ಐದು ವರ್ಷದ ದುರಾಡಳಿತದಿಂದ ಜನ ಬೇಸತ್ತಿದ್ದು, ಈ ಬಾರಿ ಬಿಜೆಪಿಗೆ ಮನ್ನಣೆ ನೀಡಲಿದ್ದಾರೆ. ಬಹುಮತದಿಂದ ನಮ್ಮ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ,ಕುಮಾರಸ್ವಾಮಿ, ಸೇರಿದಂತೆ ಹಲವರು ಇಂದು ಹಲವೆಡೆ ಬಿರುಸಿನ ಪ್ರಚಾರ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ