ಬೆಂಗಳೂರು, ಮೇ 8- ಪ್ರಸಕ್ತ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು, ಯಾವುದೇ ಸಂಸ್ಥೆ, ಯಾವುದೇ ವ್ಯಕ್ತಿ ಮುದ್ರಣ ಮಾಧ್ಯಮಗಳಲ್ಲಿ ಮೇ 11 ಮತ್ತು 12ರಂದು ಪ್ರಕಟಿಸುವ ಜಾಹೀರಾತುಗಳಿಗೆ ರಾಜ್ಯ ಅಥವಾ ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಮಾಣಿಕರಣ ಪಡೆಯುವುದು ಕಡ್ಡಾಯವಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ನಿನ್ನೆ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಈ ಮಾಹಿತಿ ನೀಡಿದ ಅವರು, ಮತದಾನದ ದಿನದ 48ಗಂಟೆಗಳ ಮುಂಚಿತವಾಗಿ ರಾಜಕೀಯ ಪಕ್ಷಗಳ ಜಾಹೀರಾತು ಹಾಗೂ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಭಾರತದ ಚುನಾವಣಾ ಆಯೋಗವು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಿದ್ದಾರೆ.
ಒಂದು ವೇಳೆ ಮೇ 11ಹಾಗೂ 12ರಂದು ಮುದ್ರಣ ಮಾಧ್ಯಮಗಳಲ್ಲಿ ರಾಜಕೀಯ ಜಾಹೀರಾತು ಪ್ರಕಟಿಸುವ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಜಾಹೀರಾತಿನ ಸ್ವಯಂ ದೃಢೀಕರಿಸಿದ ಎರಡು ಪ್ರತಿಗಳೊಂದಿಗೆ ನಿಗದಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮೇ 9ರ ಒಳಗಾಗಿ ಅಪರ ಮುಖ್ಯಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.
ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯು ಆ ಎರಡು ದಿನಗಳಂದು ಜಾಹೀರಾತು ಪ್ರಕಟಿಸಲು ಇಚ್ಚಿಸಿದರೆ ತಮ್ಮ ಜಾಹೀರಾತಿನ ಎರಡು ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುವ ಮಾಧ್ಯಮ ಪ್ರಮಾಣಿಕರಣ ಸಮಿತಿಗೆ ಮೇ 9ರೊಳಗೆ ಸಲ್ಲಿಸಬೇಕು ಎಂಬುದನ್ನು ಆಯೋಗ ಮುಖ್ಯಚುನಾವಣಾಧಿಕಾರಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ ಎಂದರು.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮತದಾನ ಮುಗಿಯುವ ಸಮಯಕ್ಕೆ ಮುಂಚಿತವಾದ 48 ಗಂಟೆಗಳ ಅವಧಿಯಲ್ಲಿ ಟಿವಿ, ರೇಡಿಯೋ, ಕೇಬಲ್ ವಾಹಿನಿಗಳು, ಎಲ್ಲ ಡಿಜಿಟಲ್ ಮಾಧ್ಯಮಗಳಲ್ಲಿ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹ ಯಾವುದೇ ಚುನಾವಣಾ ಸಂಬಂಧ ಕಾರ್ಯಕ್ರಮ ಹಾಗೂ ವಿಷಯವನ್ನು ಪ್ರಸಾರ ಮಾಡುವಂತಿಲ್ಲ.
ಅಭಿಪ್ರಾಯಗಳು, ಪ್ಯಾನಲ್ ಚರ್ಚೆಗಳು, ವಿಶ್ಲೇಷಣೆ, ಸಮೀಕ್ಷೆ ಫಲಿತಾಂಶ, ಸೌಂಡ್ಬೈಟ್ ಮೊದಲಾದವುಗಳನ್ನು ಪ್ರಸಾರ ಮಾಡುವಂತಿಲ್ಲ. ಎಲ್ಲ ಮುದ್ರಣ, ವಿದ್ಯುನ್ಮಾನ ಹಾಗೂ ಡಿಜಿಟಲ್ ಮಾಧ್ಯಮಗಳು ಮೇ 10ರ ಸಂಜೆ 6ಗಂಟೆಯಿಂದ ಮೇ 12ರ ಸಂಜೆ 6ಗಂಟೆವರೆಗೆ ಈ ಸೂಚನೆಗಳನ್ನು ಪಾಲಿಸುವಂತೆ ಅವರು ತಿಳಿಸಿದ್ದಾರೆ.