ಬೆಂಗಳೂರು:ಮೇ-8: 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೆ, ತಾವು ಪ್ರಧಾನಿಯಾಗಲು ಸಿದ್ಧರಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣ ಅಪ್ರಚಾರಕ್ಕಾಗಿ ಆಗಮಿಸಿರುವ ರಾಹುಲ್ ಗಾಂಧಿ, ಬೆಂಗಳೂರಿನಲ್ಲಿ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತವಾಗಿದ್ದು, ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಾಗ ತಾವು ಪ್ರಧಾನಿಯಾಗಲು ಸಿದ್ಧರಿರುವುದಾಗಿ ತಮ್ಮ ಮಹತ್ವಾಕಾಂಕ್ಷೆಯನ್ನು ಸ್ಪಷ್ಟಪಡಿಸಿದ್ದಾರೆ.
2019ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ ನೀವು ಪ್ರಧಾನಿಯಾಗುತ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಹೌದು, ಯಾಕಾಗಬಾರದು? ಎಂದವರು ಪ್ರತ್ಯುತ್ತರ ನೀಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಲು ಸಂಪೂರ್ಣ ಸಿದ್ದ ಎಂದು ತಿಳಿಸಿದ್ದಾರೆ.
ಇನ್ನು ಬಿಜೆಪಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ಬಿಜೆಪಿಯವರು ವ್ಯವಸ್ಥಿತವಾಗಿ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುತ್ತಿದ್ದಾರೆ.ಪ್ರಧಾನಿ ಮೋದಿ ಅವರು ನಿರಂತರವಾಗಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನನ್ನ ಪ್ರಶ್ನೆ ಏನೆಂದರೆ ಯಾಕೆ ಭ್ರಷ್ಟ, ಜೈಲು ಪಾಲಾಗಿದ್ದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಿದ್ದೀರಿ ? ಯಾಕೆ ಸ್ವಚ್ಛ ಚಾರಿತ್ರ್ಯ ಉಳ್ಳ ವ್ಯಕ್ತಿಯನ್ನು ಆಯ್ಕೆ ಮಾಡಿಲ್ಲ? 35 000 ಕೋಟಿ ರಾಜ್ಯದ ಹಣ ಲೂಟಿ ಹೊಡೆದ ಗಣಿ ಉದ್ಯಮಿಗಳನ್ನೇಕೆ ಪಕ್ಷದಲ್ಲಿ ಉಳಿಸಿಕೊಂಡಿದ್ದೀರಿ? ಯುವಜನರಿಗೆ 2 ಕೋಟಿ ಉದ್ಯೋಗ ನೀಡುತ್ತೇವೆ ಅಂದಿದ್ದೀರಲ್ಲ, ಸದ್ಯ ದೇಶದಲ್ಲಿ ಅತೀ ಹೆಚ್ಚಿನ ನಿರುದ್ಯೋಗ ಇರುವ ದಾಖಲೆ ನಿರ್ಮಾಣವಾಗಿದೆ. ಯಾಕೆ ಉದ್ಯೋಗ ಕೊಡುತ್ತಿಲ್ಲ’ ಎಂದು ಪ್ರಶ್ನಿಸಿದರು. ಇದಕ್ಕೆಲ್ಲ ಪ್ರಧಾನಿ ಉತ್ತರ ನೀಡಲಿ ಎಂದರು.
Congress President Rahul Gandhi,I will become the Prime Minister, if the party emerges as largest in the 2019 Lok Sabha election.