ಬೆಂಗಳೂರು, ಮೇ 8- ದೇಶ ಮತ್ತು ರಾಜ್ಯದ ಸಂಪೂರ್ಣ ಅಭಿವೃದ್ಧಿಗಾಗಿ ಸ್ಥಿರ ಸರ್ಕಾರದ ಅಗತ್ಯವಿದೆ. ಹಾಗಾಗಿ ಕರ್ನಾಟಕದ ಜನತೆ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ನೀಡಿ ಆಯ್ಕೆ ಮಾಡಲಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಕೊಂಡಾಡಿದರು.
ದೇವರಾಜ ಅರಸು ನಂತರ ಸಿದ್ದರಾಮಯ್ಯ ಅವರು ಐದು ವರ್ಷ ಅಧಿಕಾರ ಪೂರೈಸಿದ್ದಾರೆ. ದೇಶದಲ್ಲಿ ಆರ್ಥಿಕ ಸವಾಲುಗಳು ಎದುರಾದ ಸಂದರ್ಭದಲ್ಲಿ ರಾಜ್ಯದಲ್ಲಿ ಜನರ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳನ್ನು ಸಮಸ್ಥಿತಿಯಲ್ಲಿ ಕೊಂಡೊಯ್ದಿರುವುದು ಸಿದ್ದರಾಮಯ್ಯ ಸರ್ಕಾರದ ಸಾಧನೆ ಎಂದರು.
15ನೆ ಹಣಕಾಸು ಆಯೋಗದ ಮೂಲಕ ಕೇಂದ್ರ ಸರ್ಕಾರ ಹಣಕಾಸು ಹಂಚಿಕೆಯಲ್ಲಿ ಸಾಕಷ್ಟು ಪರಿಣಾಮ ಬೀರಿದೆ. 15ನೆ ಹಣಕಾಸು ಆಯೋಗಕ್ಕೆ ಸ್ಪಷ್ಟ ಪರಿಕಲ್ಪನೆಗಳೇ ಇಲ್ಲ. ಕೇರಳದಲ್ಲಿ ಮೊದಲ ಮತ್ತು ಆಂಧ್ರ ಪ್ರದೇಶದಲ್ಲಿ ಎರಡನೆ ಸಭೆ ನಡೆದಿದೆ. ಅಲ್ಲೆಲ್ಲೂ ಸ್ಪಷ್ಟ ರೂಪುರೇಷೆಗಳನ್ನು ತಿಳಿಸಿಲ್ಲ ಎಂದರು.
ಕರ್ನಾಟಕಕ್ಕೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ. ಎಲ್ಲ ನಿರ್ಧಾರಗಳು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಿಂದಲೇ ಹೊರಬೀಳುತ್ತಿದ್ದು, ಸಂಘಟಿತ ಅಭಿಪ್ರಾಯಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾವೇರಿ ಮತ್ತು ಮಹದಾಯಿ ವಿವಾದ ಹಲವು ದಶಕಗಳಿಂದಲೂ ಜೀವಂತವಾಗಿದೆ. ಮೋದಿ ಸರ್ಕಾರ ಕಳೆದ ನಾಲ್ಕು ವರ್ಷದಿಂದ ಈ ಬಗ್ಗೆ ಮೌನವಾಗಿದ್ದು, ಇದ್ದಕ್ಕಿದ್ದ ಹಾಗೆ ಇಲ್ಲಿನ ವಿಧಾನಸಭಾ ಚುನಾವಣೆ ವೇಳೆ ಪ್ರತಿಕ್ರಿಯಿಸಿರುವುದು ರಾಜಕೀಯ ಗಿಮಿಕ್. ಇದು ಜನರಿಗೆ ಅರ್ಥವಾಗುತ್ತದೆ ಎಂದು ಹೇಳಿದರು.
ನಾನು ಕಾವೇರಿ ವಿವಾದದಲ್ಲಿ ತಮಿಳುನಾಡು ಅಥವಾ ಕರ್ನಾಟಕ ಎಂದು ವಾದಿಸಲು ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದ ಮುಖಂಡನಾಗಿ ಕಾವೇರಿ ಪಾತ್ರದ ಎಲ್ಲ ರಾಜ್ಯಗಳು ಕುಳಿತು ಚರ್ಚೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕೆಂಬುದು ನನ್ನ ಅಭಿಪ್ರಾಯವಾಗಿದೆ. ದೇಶದ ಸಮಗ್ರ ಹಿತದೃಷ್ಟಿಯನ್ನಿಟ್ಟುಕೊಂಡು ಕಾಂಗ್ರೆಸ್ ಕೂಡ ಇದೇ ನಿಲುವು ಹೊಂದಿದೆ ಎಂದು ತಿಳಿಸಿದರು.
ಪ್ರಾದೇಶಿಕ ಭಾಷೆ ಹತ್ತಿಕ್ಕುವುದು ಅಥವಾ ಹಿಂದಿ ಭಾಷೆ ಹೇರುವುದು ಸರಿಯಲ್ಲ. ಭಾಷೆಯ ವಿಷಯದಲ್ಲಿ ಜನರೇ ತಮ್ಮ ನಿರ್ಧಾರ ತೆಗೆದುಕೊಳ್ಳಬೇಕೆಂದು ಚಿದಂಬರಂ ಸಲಹೆ ನೀಡಿದರು.