ಬೆಂಗಳೂರು, ಮೇ 8- ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲು ಉಂಟಾಗಲಿದ್ದು, ತ್ರಿಶಂಕು ವಿಧಾನಸಭೆ ನಿರ್ಮಾಣವಾಗಲಿದೆ ಎಂಬ ಭ್ರಮೆಯನ್ನು ಮತದಾರರು ಹೋಗಲಾಡಿಸಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ಕುಮಾರ್ ತಿಳಿಸಿದರು.
ಪ್ರೆಸ್ಕ್ಲಬ್ ಆಫ್ ಬೆಂಗಳೂರು, ಬೆಂಗಳೂರು ವರದಿಗಾರರ ಕೂಟ ಆಯೋಜಿಸಿದ್ದ ಮಾತು ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸಕ್ತ ಕರ್ನಾಟಕ ಚುನಾವಣೆಯಲ್ಲಿ ಸ್ಪಷ್ಟವಾದ ಆಯ್ಕೆ ಮಾಡಲಿದ್ದು, ಕಳೆದ ಐದು ವರ್ಷ ವಿನಾಶದ ಹಾದಿ ಬೇಡ. ವಿಕಸದ ಹಾದಿ ಹಿಡಿಯಬೇಕೆಂಬ ಭಾನೆಯಲ್ಲಿ ಜನತೆ ಇದ್ದಾರೆ ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರೆ ವಿನಾಶ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಂದರೆ ವಿಕಾಸ ಎಂಬುದು ಜನರ ಮನಸ್ಸಿನಲ್ಲಿದೆ ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷ ರಾಹುಲ್ಗಾಂಧಿ ಅವರ ನೇತೃತ್ವದಿಂದ ವಿಭಜನೆಯತ್ತ ಸಾಗುತ್ತಿದೆ. ದೇಶದ ಜನರು ಕಾಂಗ್ರೆಸ್ ಆಡಳಿತದ ಬಗ್ಗೆ ಬೇಸತ್ತಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರು 18 ಗಂಟೆ ಕೆಲಸ ಮಾಡಿದರೆ, ಮುಖ್ಯಮಂತ್ರಿ ಸಿದ್ದರಾಮಯಹ್ಯ ಅವರು 18 ಗಂಟೆ ನಿದ್ದೆ ಮಾಡುತ್ತಾರೆ ಎಂಬ ಭಾವನೆ ಇದೆ. ಕಳೆದ ಐದು ವರ್ಷದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರೈತರ ಆತ್ಮಹತ್ಯೆ, ಸರಗಳ್ಳತ, ಅತ್ಯಾಚಾರ ಪ್ರಕರಣಗಳು, ಹತ್ಯೆಗಳು ಇಂತಹ ಪ್ರಕರಣಗಳೆಲ್ಲವೂ ಲಾಲುಪ್ರಸಾದ್ ಅವರ ಜಂಗಲ್ ರಾಜ್ಯದ ನೆನಪನ್ನು ಮಾಡುತ್ತವೆ. ಹೀಗಾಗಿ ಲಾಲು ವರ್ಷನ್ ಆಫ್ ಕರ್ನಾಟಕ ಎಂಬಾಂತಾಗಿದೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರು ಜಾತಿ ಜಾತಿ, ಕೋಮು ಕೋಮುಗಳ ನಡುವೆ ಒಡೆದು ಹಾಳುವ ನೀತಿ ಅನುಸರಿಸುತ್ತಿದ್ದಾರೆ. ಸೌಹಾರ್ದತೆ ಕದಡಿದ್ದಾರೆ ಎಂದು ಆರೋಪಿಸಿದರು.
ಪ್ರೆಸ್ಕ್ಲಬ್ ಅಧ್ಯಕ್ಷ ಸದಾಶಿವ ಶಣೈ, ಪ್ರಧಾನಕಾರ್ಯದರ್ಶಿ ಕಿರಣ್, ವರದಿಗಾರರ ಕೂಟದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.