ಬೆಂಗಳೂರು ಮೇ 7: ಕೋಮುವಾದ ದೂರಮಾಡಿ ಸುಂದರ ಕರ್ನಾಟಕ, ಸುಂದರ ಭಾರತ ನಿರ್ಮಾಣ ಮಾಡಲು ಎಂಇಪಿಗೆ ಬೆಂಬಲ ಕೊಡಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ಮನವಿ ಮಾಡಿದ್ದಾರೆ. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಆರ್ ನಂದಕುಮಾರ್ ಪರವಾಗಿ ಇಂದು ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ದ್ವೇಷ ಬಿತ್ತಿ, ಜನರನ್ನು ಎತ್ತಿಕಟ್ಟಿ ಒಡೆದು ಆಳುವುದು ನಮ್ಮ ನೀತಿಯಲ್ಲ, ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಜನರ ಆರ್ಶಿರ್ವಾದದಿಂದ ಎಂಇಪಿ ಅಧಿಕಾರಕ್ಕೆ ಬರಲಿದೆ ನಮ್ಮ ಆಂತರಿಕ ಸಮೀಕ್ಷೆಗಳು ಕೂಡ ಇದನ್ನೆ ಪುಷ್ಟಿಕರಿಸುತ್ತಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಯಾರ ವಿರುದ್ಧವೂ ಟಕ್ಕರ್ ನೀಡಲು ನಾನು ಬಂದಿಲ್ಲ. ಯಾವುದೇ ರಾಜಕೀಯ ಪಕ್ಷ ಮತ್ತು ನಾಯಕರ ವಿರುದ್ಧ ಹೋರಾಟ ನನ್ನ ಗುರಿಯಲ್ಲ. ಅನ್ಯಾಯದ ವಿರುದ್ಧ ಸಿಡಿದೆಳುವುದು, ಮಾನವಿಯತೆಗಾಗಿ ಹೋರಾಡುವುದು, ನೊಂದವರಿಗೆ ನೆಮ್ಮದಿ, ಬದಕು ಕಟ್ಟಿಕೊಡುವುದು ನನ್ನ ರಾಜಕೀಯ ಜೀವನದ ಹೋರಾಟವಾಗಿದೆ.
ದೇಶವನ್ನು ಅತಿ ಹೆಚ್ಚು ವರ್ಷ ಆಡಳಿತ ಮಾಡಿದ ಪಕ್ಷ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲಿಲ್ಲ. ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಸಮಸ್ಯೆ ಪರಿಹರಿಸುವತ್ತ ಗಮನ ಕೊಡುತ್ತಿಲ್ಲ. ಏಕೆಂದರೆ ಅವರು ಬಹುಪಾಲು ಸಮಯವನ್ನು ವಿದೇಶದಲ್ಲಿ ಕಳೆಯುತ್ತ ಬಂದಿದ್ದಾರೆ ಎಂದು ಟಾಂಗ್ ನೀಡಿದರು.
ಎಂಇಪಿ ಅಧಿಕಾರಕ್ಕೆ ಬಂದಲ್ಲಿ ಪಕ್ಷ ಪ್ರಣಾಳಿಕೆ ಮೂಲಕ ನೀಡಿರುವ ಭರವಸೆಯಂತೆ ರೈತರ ಸಾಲ, ಬಡ್ಡಿ ಮನ್ನಾ ಮಾಡಲಾಗುವುದು. ಇದಲ್ಲದೆ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಣೆ ಮಾಡಿ ಒಳ್ಳೆಯ ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲವಾಗುವಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಶೀತಲ ಗೃಹಗಳನ್ನು, ಆಹಾರ ಧಾನ್ಯಗಳ ಗೋದಾಮುಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಮಹಿಳೆಯರು ನೆಮ್ಮದಿ ಮತ್ತು ಸ್ವಾಭಿಮಾನದಿಂದ ಬದುಕುವಂತಹ ನಿರ್ಮಲ ವಾತಾವರಣ ಕಲ್ಪಿಸಿ ಕೊಡಲಾಗುವುದು. ತಾಲೂಕು ಮಟ್ಟದಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸಿ ಬಡವರಿಗೆ ಉಚಿತ ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು. ಶಾಸನಸಭೆ, ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಚುನಾಯಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಸ್ಥಾನಗಳನ್ನು ಮೀಸಲಿಡಲಾಗುವುದು ಎಂದರು.
ದೊಡ್ಡ ದೊಡ್ಡ ನಗರಗಳಲ್ಲಿ ಆಟೋ ಚಾಲಕರಿಗೆ ಬಡ್ಡಿರಹಿರವಾಗಿ ಆಟೋ ಸಾಲ ನೀಡಿ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸಂಚಲನ ಮೂಡಿಸಿದ ತಾರೆಯರ ದಂಡು ಇಂದು ನಡೆದ ಎಂಇಪಿ ರೋಡ್ ಶೋ. ರ್ಯಾಲಿಯಲ್ಲಿ ಬಾಲಿವುಡ್ ತಾರೆಯರ ಜತೆಗೆ ಸ್ಯಾಡಲ್ ವುಡ್ ತಾರೆಯರಾದ ಶೃತಿ, ಚಂದನ್ ಸೇರಿಕೊಂಡು ಪ್ರಚಾರಕ್ಕೆ ಹೊಸ ಮೆರೆಗು, ಸಂಚಲನಕ್ಕೆ ಕಾರಣರಾದರು.
ಮಾರತಹಳ್ಳಿಯ ಕಾಡುಬೀಸನಹಳ್ಳಿಯಿಂದ ಶುರುವಾದ ರ್ಯಾಲಿಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡು ಎಂಇಪಿ ಪರ ಘೋಷಣೆಗಳನ್ನು ಕೂಗಿದರು. ಪಕ್ಷದ ಅಧ್ಯಕ್ಷರು ರ್ಯಾಲಿಗೆ ಚಾಲನೆ ಕೊಡುತ್ತಿದ್ದಂತೆ ಹೂವಿನ ಮಳೆ ಸುರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಉಳಿದಂತೆ ರ್ಯಾಲಿಯಲ್ಲಿ ಬಾಲಿವುಡ್ ಸ್ಟಾರ್ ಗಳಾದ ಕನ್ನಡ ಕುವರ ಸುನೀಲ್ ಶೆಟ್ಟಿ ಅರ್ಬಾಜ್ ಖಾನ್, ಸೂಹೆಲ್ ಖಾನ್, ಸೋನು ಸೂದ್, ಪ್ರಚಾರದ ಪ್ರಮುಖ ತಾರಾ ಆಕರ್ಷಣೆ ಆಗಿದ್ದರು.