
ಕಾರವಾರ:ಮೇ-7: ಕುಮಟಾದ ದೀವಗಿ ಸೇತುವೆ ಬಳಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಕಾರು ಮತ್ತೆ ಅಪಘಾತಕ್ಕೀಡಾಗಿದೆ.
ಶಿರಸಿಯಿಂದ ಕುಮಟಾಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಇನ್ನೋವಾ ಕಾರೊಂದು ಅನಂತಕುಮಾರ ಹೆಗಡೆಯವರ ಬೆಂಗಾವಲು ವಾಹನಕ್ಕೆ ಅಡ್ಡ ಬಂದಿದೆ. ಇದರಿಂದಾಗಿ ಬೆಂಗಾವಲು ವಾಹನದ ಚಾಲಕ ಒಂದೇ ಸಮನೆ ಬ್ರೇಕ್ ಹಾಕಿದ್ದಾನೆ.
ಈ ವೇಳೆ ಅನಂತಕುಮಾರ ಹೆಗಡೆಯವರ ವಾಹನ ಹಾಗೂ ಮುಂದೆ ಚಲಿಸುತ್ತಿದ್ದ ಅವರ ಬೆಂಗಾವಲು ವಾಹನಕ್ಕೆ ಡಿಕ್ಕಿಯಾಗಿದೆ. ಆದರೆ ಯಾವುದೇ ಗಂಭೀರ ಅವಘಡ ನಡೆದಿಲ್ಲ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು ನಾನು ಮತ್ತೊಂದು ಕಾರು ಅಪಘಾತದಿಂದ ಪಾರಾಗಿದ್ದು, ಮತ್ತೊಂದು ಪುನರ್ಜನ್ಮ ಪಡೆದಿದ್ದೇನೆ ಎಂದು ಹೇಳಿದ್ದಾರೆ.