ಕೋಲಾರದಲ್ಲಿ ರಾಹು ಗಾಂಧಿ ರೋಡ್ ಶೋ: ತೈಲಬೆಲೆ ಏರಿಕೆ ಖಂಡಿಸಿ ಸೈಕಲ್ ತುಳಿದು, ಸಿಲಿಂಡರ್ ಮಾದರಿ ಪ್ರದರ್ಶಿಸಿ ರಾಗಾ ವಿನೂತನ ಪ್ರತಿಭಟನೆ

ಕೋಲಾರ:ಮೇ-7: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ದಿನದಿಂದ ದಿನಕ್ಕೆ ತೈಲ ಬೆಲೆಗಳು ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ ಡಿಸೇಲ್ ಹಣ ಎಲ್ಲಿ ಹೋಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಕೋಲಾರದ ಮಾಲೂರಿನಲ್ಲಿ ಚುನಾವಣಾ ರ್ಯಾಲಿ ನಡೆಸಿದ ರಾಹುಲ್ ಗಾಂಧಿ, ಪಕ್ಷದ ಅಭ್ಯರ್ಥಿ ಕೆ.ವೈ. ನಂಜೇಗೌಡ ಪರ ಚುನಾವಣಾ ಪ್ರಚಾರ ನಡೆಸಿದರು.

ಇದೇವೇಳೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು. ರಾಹುಲ್‌ ಗಾಂಧಿ ಹಾಗೂ ಪಕ್ಷದ ಕಾರ್ಯಕರ್ತರು ಸೈಕಲ್‌ ಮತ್ತು ಎತ್ತಿನ ಬಂಡಿಯಲ್ಲಿ ಸಾಗಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಅಡುಗೆ ಅನಿಲದ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾರ್ಯಕರ್ತರು ಸಿಲಿಂಡರ್‌ ಮಾದರಿಗಳನ್ನು ಪ್ರದರ್ಶಿಸಿ, ‘ಮೋದಿ ಸರ್ಕಾರ ತೊಲಗಲಿ’ ಎಂದು ಘೋಷಣೆ ಕೂಗಿದರು. ರಾಹುಲ್‌ ಗಾಂಧಿ ಜನಾಶೀರ್ವಾದ ಯಾತ್ರೆಯ ಬಸ್‌ನಿಂದ ಕೆಳಗಿಳಿದು ಮಹಿಳಾ ಕಾರ್ಯಕರ್ತರ ಜತೆ ಹೆಜ್ಜೆ ಹಾಕಿದರು. ಅಲ್ಲದೇ ಪಕ್ಷದ ಮಹಿಳಾ ಕಾರ್ಯಕರ್ತರ ಜತೆಗೂಡಿ ಸಿಲಿಂಡರ್‌ ಮಾದರಿಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 8 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಆದ್ರೆ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ ರೈತರ ಒಂದು ರೂ. ಸಾಲ ಮನ್ನಾ ಮಾಡಿಲ್ಲ. ಒಂದು ವರ್ಷ ತಾಳಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದೆ. ಆಗ ದೇಶದ ಎಲ್ಲ ರೈತರ ಸಾಲವನ್ನು ಮಾಡಲಿದ್ದೇವೆ ಎಂದು ರಾಹುಲ್ ಗಾಂಧಿ ಈಗಲೇ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಕುರಿತು ಸುಳಿವು ನೀಡಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟ ಸರ್ಕಾರವನ್ನ ರಚಿಸಿದ್ರು. ಕರ್ನಾಟಕವನ್ನ ಸಂಪೂರ್ಣ ಧ್ವಂಸ ಮಾಡಿದವರು ಯಡಿಯೂರಪ್ಪ. ಬಿಎಸ್‌ವೈಗೆ ಸಿಎಂ ಆಗುವ ಯಾವ ಕ್ವಾಲಿಟಿ ಇದೆ ಎಂಬುದರ ಬಗ್ಗೆ ನರೇಂದ್ರ ಮೋದಿ ಉತ್ತರಿಸಲಿ ಎಂದು ಆಗ್ರಹಿಸಿದರು.

karnataka assembly election,Rahul gandhi,kolar,malur

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ