ಮನಿಲಾ, ಮೇ 6- ಭಾರತದ ಆರ್ಥಿಕತೆ ಮತ್ತು ಜಿಡಿಪಿ ಬೆಳವಣಿಗೆ 7ರ ಗಡಿ ದಾಟಿದ್ದು , ರೋಚಕ ಸ್ಥಿತಿಯಲ್ಲಿ ಮುನ್ನಡೆಯುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ 10 ವರ್ಷದಲ್ಲಿ ಇದು ದ್ವಿಗುಣಗೊಳ್ಳುತ್ತದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್(ಎಡಿಬಿ)ನ ಪ್ರಧಾನ ಆರ್ಥಿಕ ತಜ್ಞೆ ಯಶಶೂಕಿ ಸವಾದ ಹೇಳಿದ್ದಾರೆ.
ಪ್ರಸ್ತುತ ಜಿಡಿಪಿ 8ರ ಗಡಿಗೆ ಮುಟ್ಟುವ ಹಾದಿಯಲ್ಲಿದೆ. ಆರ್ಥಿಕತೆ ಬಗ್ಗೆ ಹೆಚ್ಚು ಚಿಂತೆ ಮಾಡದೆ ಮುಂದಿನ ದಿನಗಳಲ್ಲಿ ದೇಶೀಯ ಬೇಡಿಕೆಗಳಿಗೆ ಒತ್ತು ನೀಡಿ ಲಾಭದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ ಎಂದು ಅವರು ಹೇಳಿದ್ದಾರೆ.
ರಫ್ತಿಗಿಂತ ದೇಶೀಯ ಮಾರುಕಟ್ಟೆ ಉತ್ಪನ್ನಗಳಿಂದಲೇ ಹೆಚ್ಚು ಪ್ರಗತಿ ಕಂಡು ಬಂದಿದ್ದು , ಇದನ್ನು ನೋಡಿದರೆ ಆರ್ಥಿಕ ಬೆಳವಣಿಗೆ ಅತಿ ವೇಗದಲ್ಲಿ ಸಾಗುತ್ತಿರುವುದು ಕಂಡು ಬರುತ್ತಿದೆ. ಇದೊಂದು ರೋಚಕ ಸ್ಥಿತಿ ಎಂದು ಅವರು ವರ್ಣಿಸಿದ್ದಾರೆ.
ಕಳೆದ 2017ರಲ್ಲಿ 6.6ರಷ್ಟಿದ್ದ ಜಿಡಿಪಿ 2018ರ ಮಾ.31ರ ಅಂತ್ಯಕ್ಕೆ 7ರ ಗಡಿ ದಾಟಿದೆ. 2019ರ ಆರ್ಥಿಕ ವರ್ಷದ ಅಂತ್ಯಕ್ಕೆ 8ರ ಗಡಿ ಮುಟ್ಟುವುದರಲ್ಲಿ ಅನುಮಾನವಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತದ ಆರ್ಥಿಕತೆ ಪ್ರಸ್ತುತ 2.5 ಟ್ರಿಲಿಯನ್ ಡಾಲರ್ನಷ್ಟಿದ್ದು ಇದು ವಿಶ್ವದ 6ನೆ ಅತಿ ದೊಡ್ಡ ಆರ್ಥಿಕ ಪ್ರಗತಿಯ ರಾಷ್ಟ್ರವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
2025ರ ವೇಳೆಗೆ ಇದು 5 ಟ್ರಿಲಿಯನ್ ಡಾಲರ್ಗೆ ಏರುವ ಸಾಧ್ಯತೆ ಇದೆ ಎಂದು ವಿಶ್ವ ಆರ್ಥಿಕತೆ ಸಚಿವಾಲಯದ ಕಾರ್ಯದರ್ಶಿ ಸುಭಾಷ್ ಚಂದ್ರ ಘರ್ ಇತ್ತೀಚೆಗೆ ಹೇಳಿದ್ದರು.
ಸವಾದ ಅವರ ಈ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ. 8ರ ಗಡಿ ಮುಟ್ಟುವುದು ಎಂದರೆ ಅತಿ ದೊಡ್ಡ ಸವಾಲು. ಆದರೂ ಯಾವುದೇ ಅಂಜಿಕೆ ಇಲ್ಲದೆ ಮುನ್ನಡೆಯಬೇಕು. ಚಿಂತೆಗೆ ಬೀಳಬಾರದು ಎಂದು ಅವರು ಹೇಳಿದ್ದಾರೆ.