ಕೋಲಾರ, ಮೇ 6-ಯಾರ ಹಂಗಿಲ್ಲದೆ ಸರ್ಕಾರ ರಚನೆ ಮಾಡಲು ನಾನು ನಿಮ್ಮ ಮನೆಯ ಬಾಗಿಲಿಗೆ ಬಂದಿದ್ದೇನೆ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಮೂಲಕ ಸರ್ಕಾರ ನಡೆಸುವ ಅವಕಾಶ ನೀಡಿ ಎಂದು ಜನತೆಯಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ನಗರದ ಹೊರವಲಯದಲ್ಲಿ ವಿಕಾಸಪರ್ವ ಯಾತ್ರೆಯಲ್ಲಿ ಮಾತನಾಡಿದ ವರು, ನನಗೆ ಯಾವ ಹೈಕಮಾಂಡ್ ಇಲ್ಲ. ನೀವೇ ನನಗೆ ಹೈಕಮಾಂಡ್. ಯಾವ ಪಕ್ಷದ ಬಾಗಿಲಿಗೂ ಹೋಗುವವಂತನಲ್ಲ. ನಿಮ್ಮ ಮನೆ ಬಾಗಿಲಿಗೆ ಬಂದು ಮತ ಕೇಳುತ್ತೇನೆ. ನನ್ನನ್ನು ಮುಖ್ಯಮಂತ್ರಿ ಮಾಡಿದ 24ಗಂಟೆಗಲ್ಲಿ ರೈತರು ರಾಷ್ಟ್ರೀಕೃತ ಬ್ಯಾಂಕ್, ಗ್ರಾಮೀಣ ಬ್ಯಾಂಕ್ , ಸಹಕಾರಿ ಬ್ಯಾಂಕ್‍ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಘೋಷಿಸಿದರು.
ಕುಮಾರಸ್ವಾಮಿ ಅಲೆಯಿಂದ ಬೆಚ್ಚಿಬಿದ್ದ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಬಗ್ಗೆ ಹೇಳಿರುವುದು ಹಾಸ್ಯಾಸ್ಪದ ಎಂದರು.
ನೀವು ನೀಡಿರುವ ತೆರಿಗೆ ಹಣ ಇಲ್ಲಿಯೇ ಖರ್ಚಾಗುತ್ತದೆ. ಈಗಿನ ಸರ್ಕಾರ ರಾಜ್ಯದ ಅನುದಾನವನ್ನೆಲ್ಲ ಕಾಂಗ್ರೆಸ್ ಹೈಕಮಾಂಡ್‍ಗೆ ಸೇರುತ್ತಿದೆ ಎಂದು ವಿವರಿಸಿದರು.
ನಮ್ಮ ಸರ್ಕಾರ ಬಂದ ನಂತರ ರೈತನ ಬದುಕನ್ನು ಹಸನುಗೊಳಿಸುವುದೇ ನನ್ನ ಗುರಿ ಎಂದು ಹೇಳಿ ರೈತನಿಗೆ ಆತನ ಕಸುಬಿನಲ್ಲಿಯೆ ಅನೇಕ ಉಪಕಸುಬನ್ನು ಪರಿಚಯಿಸಲಾಗುವುದು ಎಂದರು.
ಅರಣ್ಯ ಇಲಾಖೆ ಪ್ರತಿವರ್ಷ ಸಸಿಗಳನ್ನು ನೆಡುತ್ತೇವೆ ಎಂದು ಹೇಳುತ್ತಾರೆ, ಎಲ್ಲಾದರೂ ಕಂಡಿದ್ದೀರ ಎಂದು ಜನತೆಯನ್ನು ಪ್ರಶ್ನಿಸಿ ಮುಂದಿನ ದಿನಗಳಲ್ಲಿ ಸಸಿ ನೆಡುವ ಕಾರ್ಯವನ್ನು ನಿರುದ್ಯೋಗ ಯುವಕರಿಗೆ ವಹಿಸಿ 5 ಸಾವಿರ ಸಂಬಳ ನೀಡುವ ಮೂಲಕ ಪರಿಸರವನ್ನು ಕಾಪಾಡುತ್ತೇವೆ ಎಂದು ಹೇಳಿದರು.
ರಾಜ್ಯಕ್ಕೆ ಸಮ್ಮಿಶ್ರ ಸರ್ಕಾರ ಬೇಡ. ನಮ್ಮ ಪಕ್ಷ 113 ಗುರಿಯನ್ನು ಮುಟ್ಟೇ ಮುಟ್ಟುತ್ತೇವೆ. ಜೆಡಿಎಸ್ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ದೃಢ ಸರ್ಕಾರ ನಿರ್ಮಿಸಲು ಸಹಕಾರ ಮಾಡಿ ಎಂದು ಮನವಿ ಮಾಡಿದರು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಎಸ್‍ಪಿ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿ ಮಾತನಾಡಿ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ದುರ್ಬಲಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸಲಾತಿ ತುಂಬಲು ವಿಫಲವಾಗಿದೆ. ಬಡ್ತಿ ಮೀಸಲಾತಿಯಲ್ಲಿ ಕೂಡ ಅನ್ಯಾಯವಾಗುತ್ತಿದೆ ಎಂದರು.
ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಕಲ್ಪಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅತ್ಯಗತ್ಯ ಎಂದರು.
ಸಮಾರಂಭದಲ್ಲಿ ಉತ್ತರಪ್ರದೇಶದ ಸಂಸದರಾದ ಸತೀಶ್‍ಮಿಶ್ರಾ, ರಾಷ್ಟ್ರೀಯ ಜೆಡಿಎಸ್ ಜನರಲ್ ಸೆಕ್ರೆಟರಿ ಡ್ಯಾನಿಷ್ ಹಾಲಿ, ಜಿಲ್ಲೆಯ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್‍ಬಾಬು, ಕೋಲಾರದ ಶ್ರೀನಿವಾಸ್‍ಗೌಡ, ಶ್ರೀನಿವಾಸಪುರದ ಜಿ.ಕೆ.ವೆಂಕಟಶಿವಾರೆಡ್ಡಿ, ಮಾಲೂರಿನ ಮಂಜುನಾಥ್‍ಗೌಡ, ಕೆಜಿಎಫ್‍ನ ಭಕ್ತವತ್ಸಲಂ, ಮುಳಬಾಗಿಲಿನ ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಚೌಡರೆಡ್ಡಿ, ರಮೇಶ್‍ಬಾಬು, ಮುಖಂಡರಾದ ಗೋವಿಂದರಾಜು, ಕೆ.ವಿ.ಶಂಕರಪ್ಪ, ಡಾ.ರಮೇಶ್ ಮತ್ತಿತರರು ಹಾಜರಿದ್ದರು.