ಬೆಂಗಳೂರು:ಮೇ-6: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿರುವಂತೆಯೇ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಗ್ ಶಾಕ್ ನೀಡಿದ್ದು, ಸಿಎಂ ವಿರುದ್ಧ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಲಾಗಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಸುದ್ದಿಗೋಷ್ಠಿ ನಡೆಸಿದ್ದು, 2013ರಲ್ಲಿ ಸಿಎಂ ಸಿದ್ದರಾಮಯ್ಯ ಚೀನಾಗೆ ತೆರಳಿದ್ದಾಗ ಸಿದ್ದರಾಮಯ್ಯ ಅವರು ವಿಜಯ್ ಈಶ್ವರ್ ಅವರ್ನ್ನು ಭೇಟಿಯಾಗಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೇ ಈ ಸಂಬಂಧ ಸಿಎಂ ವಿರುದ್ಧ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
2009ರಲ್ಲಿಯೇ ನಾಪತ್ತೆಯಾಗಿರುವ ವಿಜಯ್ ಈಶ್ವರನ್ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಣಿಸಿಕೊಂಡಿರುವ ಫೋಟೋ ಕೂಡ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ವಿಜಯ್ ಈಶ್ವರನ್ ಕೈಯಲ್ಲಿ ಗಿಫ್ಟ್ ಪ್ಯಾಕೆಟ್ ಇದ್ದು, ಅದರಲ್ಲಿ ದುಬಾರಿ ಹ್ಯೂಬ್ಲೆಟ್ ವಾಚ್ ಇದ್ದು, ಅದನ್ನು ಸಿಎಂಗೆ ನೀಡಿರುವ ಬಗ್ಗೆ ಶಂಕಿಸಿ ಈ ದಾಖಲೆ ಬಿಡುಗಡೆ ಮಾಡಲಾಗಿದೆ. ನಾವು ಈಶ್ವರನ್ ನೀಡಿದ್ದು ವಾಚ್ ಎಂದು ಹೇಳುತ್ತಿಲ್ಲ. ಆ ಗಿಫ್ಟ್ ವಾಚ್ ಇರಬಹುದಾ ಎಂದು ಸಿದ್ದರಾಮಯ್ಯಗೆ ಪ್ರಶ್ನೆ ಮಾಡುತ್ತಿದ್ದೇವೆ ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ.
ತಮಿಳು ಮೂಲದ ಮಲೇಷ್ಯಾದ ಉದ್ಯಮಿಯಾಗಿರುವ ವಿಜಯ್ ಈಶ್ವರನ್ ಹಣವನ್ನು ದುಪ್ಪಟ್ಟುಗೊಳಿಸುವ ಚೈನ್ ಬಿಸಿನೆಸ್ ಅನ್ನು ಭಾರತದಲ್ಲಿ ಆರಂಭಿಸಿದ್ದ. ಕಡಿಮೆ ಸಮಯದಲ್ಲಿ ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಬಹಳಷ್ಟು ಮಂದಿ ಈ ಯೋಜನೆಯಲ್ಲಿ ಹಣವನ್ನು ಹೂಡಿದ್ದರು. ಕ್ಯೂನೆಟ್ ಕಂಪನಿ ಮಾಲೀಕರಾಗಿರುವ ವಿಜಯ್ ಈಶ್ವರನ್ ವಿರುದ್ಧ ದೇಶಾದ್ಯಂತ ಸುಮಾರು 100ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿವೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾಪತ್ತೆಯಾಗಿದ್ದ ಈ ಉದ್ಯಮಿಗೆ ಹಣ ಹೂಡುವಂತೆ ಆಹ್ವಾನಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಒಟ್ಟಾರೆ ಬಿಜೆಪಿ ಸಿಎಂ ಸಿದ್ದರಾಮಯ್ಯನವರಿಗೆ ಈ ವೇಳೆ ಒಟ್ಟು5 ಪ್ರಶ್ನೆಗಳನ್ನು ಮುಂದಿಟ್ಟಿದೆ.
* ವಿಜಯ್ ಈಶ್ವರನ್ನ್ನ ಸಿದ್ದರಾಮಯ್ಯ ಚೀನಾದಲ್ಲಿ ಭೇಟಿ ಮಾಡಿದ್ದು ಏಕೆ?
* ಭೇಟಿ ವೇಳೆ ನಿಮಗೆ ಈಶ್ವರನ್ ಗಿಫ್ಟ್ ನೀಡಿದ್ದಾರೆ ಅಲ್ವಾ?
* ಅದು ಬೆಲೆ ಬಾಳುವ ಗಿಫ್ಟ್ ಎನ್ನಲಾಗಿದೆ. ಆ ದುಬಾರಿ ಗಿಫ್ಟ್ ಏನು?
* ಆ ಗಿಫ್ಟ್ ಹ್ಯುಬ್ಲೊಟ್ ವಾಚ್ ಇರಬಹುದೇ?
* ಬಾದಾಮಿ ಮತ್ತು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡುವಾಗ ಸಿಕ್ಕಿದ ಉಡುಗೊರೆಯನ್ನು ಏನೆಂದು ತಿಳಿಸಿದ್ದೀರಿ?