ಮೈಸೂರು:ಮೇ-6: ದುಬಾರಿ ಹ್ಯೂಬ್ಲೆಟ್ ವಾಚ್ ವಿಚಾರವಾಗಿ ಫೋಟೋ ಬಿಡುಗಡೆ ಮಾಡಿದ ಬಿಜೆಪಿ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಉದ್ಯಮಿ ವಿಜಯ್ ಈಶ್ವರನ್ ಯಾರು ಎಂಬುದೇ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ, ನನ್ನ ಮೇಲೆ ಮಾತನಾಡುವುದಕ್ಕೆ ಅವರಿಗೆ ಬೇರೆ ಯಾವ ವಿಚಾರವೂ ಇಲ್ಲ. ಹೀಗಾಗಿ ಬರೀ ವಾಚ್ ವಿಚಾರ ಹಿಡಿದುಕೊಂಡಿದ್ದಾರೆ . ಮೋದಿ ಹಾಕಿದ್ದ 15 ಲಕ್ಷ ರೂಪಾಯಿ ಬೆಲೆ ಬಾಳುವ ಕೋಟ್ ಕೊಟ್ಟಿದ್ದು ಯಾರು ? ಅದಕ್ಕೆ ಮೋದಿ ಟ್ಯಾಕ್ಸ್ ಕಟ್ಟಿದ್ದಾರಾ ? ಮೊದಲು ಇದಕ್ಕೆ ಮೋದಿ ಉತ್ತರ ಕೊಡಲಿ ಎಂದು ತಿರುಗೇಟು ನೀಡಿದರು.
ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಾಲ ಮನ್ನಾ ಮಾಡಲು ಹಣವಿಲ್ಲ, ನಮ್ಮ ಬಳಿ ನೋಟ್ ಪ್ರಿಂಟ್ ಮಶಿನ್ ಇಲ್ಲ ಎಂದಿದ್ದ ಬಿಎಸ್ವೈ ಈಗ ಸಾಲ ಮನ್ನಾ ಮಾಡುತ್ತೇನೆ ಎಂದಿರುವುದು ಹಾಸ್ಯಾಸ್ಪದ. ಅಮಿತ್ ಶಾ ರಿಂದ ಯಾವುದೇ ತಂತ್ರ ಮಂತ್ರವು ಸಾಧ್ಯವಿಲ್ಲ. ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಅನ್ನಭಾಗ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡ ವೃದ್ಧಾಶ್ರಮಕ್ಕೆ ಹೋಗಲಿ ಎಂದಿದ್ದ ಮೋದಿ ಈಗ ಗೌರವದ ನಾಟಕ ಆಡುತ್ತಿದ್ದಾರೆ ಎಂದು ಗುಡುಗಿದರು. 224 ಕ್ಷೇತ್ರಗಳಲ್ಲಿ ಒಬ್ಬ ಮುಸ್ಲಿಂ ಹಾಗೂ ಕ್ರಿಶ್ಚಿಯನ್ಗೂ ಟಿಕೆಟ್ ನೀಡಿಲ್ಲ ಇದೇನಾ ಮೋದಿಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್? ಎಂದು ಟೀಕಿಸಿದರು.
ಇನ್ನು ಯಡಿಯೂರಪ್ಪ ಯಾವಾಗಲೂ ಮುಖ್ಯಮಂತ್ರಿ, ಮುಖ್ಯಮಂತ್ರಿ ಅಂತ ಕನವರಿಸುತ್ತಿದ್ದಾರೆ. ಅವರಿಗೆ ಮೆಂಟಲ್ ಡಿಪ್ರೆಷನ್ ಆಗಿದೆ. ಇವರೆಲ್ಲ ಕಳಂಕಿತರು. ಇವರಿಗೆ ಅಧಿಕಾರ ಸಿಗೋಕೆ ಸಾಧ್ಯನಾ? ಬಿಎಸ್ ವೈ ಸಿಎಂ ಆಗಲು ಸಾಧ್ಯನಾ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಟೆಕ್ಸ್ಟೈಲ್ ಪಾರ್ಕ್ ಮಾಡದ ಸಿಎಂ ಅನ್ನು ಒದ್ದು ಓಡಿಸಿ ಎಂಬ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಬಾಗಲಕೋಟೆಯಲ್ಲಿ ಟೆಕ್ಸ್ಟೈಲ್ ಪಾರ್ಕ್ ಮಾಡುತ್ತೇನೆ ಎಂದು ಹೇಳಿಲ್ಲ. ಭಾರತೀಯರ ಅಕೌಂಟಿಗೆ 15 ಲಕ್ಷ ರೂ. ಹಾಕುತ್ತೇವೆ ಎಂಬ ನಿಮ್ಮ ಭರವಸೆ ಏನಾಯಿತು? ಕಪ್ಪು ಹಣ ವಾಪಸ್ ತರುವ ನಿಮ್ಮ ಭರವಸೆ ಏನಾಯಿತು? ಈ ಭರವಸೆ ಈಡೇರಿಸದ ನಿಮ್ಮನ್ನು ಏನು ಮಾಡಬೇಕು? ಎಂದು ಪ್ರಶ್ನಿಸಿದರು.