ಮತೀಯ ಸಂಘಟನೆಗಳನ್ನು ಕೇಂದ್ರ ಸರ್ಕಾರವೇ ನಿಷೇಧಿಸಬೇಕಿದ್ದು, ರಾಜ್ಯಸರ್ಕಾರಗಳಿಗೆ ಯಾವುದೇ ಅಧಿಕಾರ ಇಲ್ಲ: ಕೇರಳ ಮಾಜಿ ಮುಖ್ಯಮಂತ್ರಿ ಉಮನ್‍ಚಾಂಡಿ

ಬೆಂಗಳೂರು, ಮೇ 5-ಪಿಎಫ್‍ಐ ಸೇರಿದಂತೆ ಮತೀಯ ಸಂಘಟನೆಗಳನ್ನು ಕೇಂದ್ರ ಸರ್ಕಾರವೇ ನಿಷೇಧಿಸಬೇಕಿದ್ದು, ರಾಜ್ಯಸರ್ಕಾರಗಳಿಗೆ ಯಾವುದೇ ಅಧಿಕಾರ ಇಲ್ಲ ಎಂದು ಕೇರಳದ ಮಾಜಿ ಮುಖ್ಯಮಂತ್ರಿ ಉಮನ್‍ಚಾಂಡಿ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಫ್‍ಐ ಸಂಘಟನೆ ನಿಷೇಧಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿಕೆ ನೀಡಿದ್ದಾರೆ. ಆ ಸಂಘಟನೆ ಚಟುವಟಿಕೆಗಳ ಸಮಗ್ರ ಮಾಹಿತಿ ಕೇಂದ್ರ ಸರ್ಕಾರದ ಬಳಿಯೇ ಇರುತ್ತದೆ. ಹಾಗಾಗಿ ನಿಷೇಧ ಮಾಡುವುದು ಹಾಗೂ ಮಾಡದಿರುವ ಬಗ್ಗೆ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು. ರಾಜ್ಯಸರ್ಕಾರಗಳಿಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯಲ್ಲಿ ಯಾವುದನ್ನೂ ಈಡೇರಿಸಿಲ್ಲ. ಕಪ್ಪು ಹಣವನ್ನು ವಾಪಸ್ ತಂದು ದೇಶದ ಎಲ್ಲಾ ನಾಗರಿಕರ ಖಾತೆಗೆ ತಲಾ 15ಲಕ್ಷ ರೂ. ಠೇವಣಿ ಮಾಡುವುದಾಗಿ ಹೇಳಿದ್ದರು. ಅದು ಈವರೆಗೂ ಈಡೇರಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ನಾಲ್ಕು ವರ್ಷಗಳಲ್ಲಿ 64 ಲಕ್ಷ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದೆ. ದೇಶದಲ್ಲಿ ಪೆಟ್ರೋಲ್-ಡೀಸಲ್ ದರ ಇಳಿಮುಖವಾಗಿಲ್ಲ. ಜನತೆ ಕೇಂದ್ರಸರ್ಕಾರದ ಧೋರಣೆಯಿಂದ ಭ್ರಮನಿರಸನಗೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಜನಪರವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಶಾಲಾ ಮಕ್ಕಳಿಗೆ ಉಚಿತ ಹಾಲು ವಿತರಿಸುವ ಕ್ಷೀರಭಾಗ್ಯ ಯೋಜನೆ ಜಾರಿಯಲ್ಲಿದೆ. ದೇಶದಲ್ಲೇ ಅತಿ ದೊಡ್ಡದಾದ ಸೋಲಾರ್‍ಪಾರ್ಕ್ ನಿರ್ಮಿಸಲಾಗಿದೆ. ಬಡವರಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ನೀಡುವ ಇಂದಿರಾ ಕ್ಯಾಂಟೀನ್ ಸ್ಥಾಪನೆಯಾಗಿದೆ. ಆದರೆ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಬಿಟ್ಟು ಮತ್ತೇನನ್ನೂ ಮಾಡಲಿಲ್ಲ ಎಂದು ತಿರುಗೇಟು ನೀಡಿದರು.

ನಾನು ನಿನ್ನೆಯಿಂದ ಬೆಂಗಳೂರಿನಲ್ಲಿ ಕಾಂಗ್ರೆಸ್ ಪರವಾಗಿ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ಭೋಜನ ಮಾಡಿದ್ದೇನೆ. ಉತ್ತಮ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರದ ಜನಪರ ಕಾಳಜಿಗೆ ಈ ಬಾರಿ ಜನತೆ ಕಾಂಗ್ರೆಸ್‍ಗೆ ಮತ ಹಾಕಿ ಮತ್ತೊಮ್ಮೆ ಆಶೀರ್ವದಿಸಲಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ