ಹೇಮಾವತಿ-ನೇತ್ರಾವತಿ ನದಿ ಜೋಡಣೆ ಕಾರ್ಯ ಕಲ್ಪತರು ನಾಡಿಗೆ ಶಾಶ್ವತ ನೀರಾವರಿ ಸೌಲಭ್ಯ : ಪ್ರಧಾನಿ ನರೇಂದ್ರ ಮೋದಿ

ತುಮಕೂರು, ಮೇ5- ಹೇಮಾವತಿ-ನೇತ್ರಾವತಿ ನದಿ ಜೋಡಣೆ ಕಾರ್ಯ ಕೈಗೆತ್ತಿಕೊಳ್ಳುವ ಮೂಲಕ ಕಲ್ಪತರು ನಾಡಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಭರವಸೆ ನೀಡಿದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಿದ ಅವರು, ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ಎಂದಿನಂತೆ ಟೀಕಾಪ್ರಹಾರ ನಡೆಸಿದರು.

ಕಲ್ಪತರು ನಾಡು ತುಮಕೂರಿನ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಸಿದ್ದಗಂಗಾ ಮಠದ ಪರಮ ಪೂಜ್ಯ, ನಡೆದಾಡುವ ದೇವರು, ಶ್ರೀ ಡಾ.ಶಿವಕುಮಾರ ಸ್ವಾಮೀಜಿ, ಖ್ಯಾತ ವಿಜ್ಞಾನಿ ಡಾ.ರಾಜರಾಮಣ್ಣ , ರಂಗಕರ್ಮಿ ಗುಬ್ಬಿ ವೀರಣ್ಣ ಸೇರಿದಂತೆ ಮತ್ತಿತರರನ್ನು ಸ್ಮರಿಸುವ ಮೂಲಕ ನೆರೆದಿದ್ದ ಜನರನ್ನು ಹುಚ್ಚೆಬ್ಬಿಸಿದರು.


ರಾಜ್ಯದಲ್ಲಿ 50 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಿಲ್ಲ. ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನ ಮಾಡುತ್ತೇನೆಂದು ಚುನಾವಣೆಗೂ ಮುನ್ನ ಜಿಲ್ಲೆಯ ಜನತೆಗೆ ಮೂಗಿಗೆ ತುಪ್ಪ ಸವರಿತೇ ಹೊರತು ನೀರು ಮಾತ್ರ ಬರಲೇ ಇಲ್ಲ ಎಂದು ಕಿಡಿಕಾರಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನಂತೆ ದೇಶದೆಲ್ಲೆಡೆ ನದಿ ನೀರು ಜೋಡಣೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ 24 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ನಾವು ನೇತ್ರಾವತಿ-ಹೇಮಾವತಿ ನದಿ ನೀರು ಜೋಡಣೆ ಮೂಲಕ ಜಿಲ್ಲೆಗೆ ನೀರಾವರಿ ಒದಗಿಸಲಿದ್ದೇವೆ. ಇದರಿಂದ ಎಂಟು ಜಿಲ್ಲೆಗಳಿಗೆ ನೀರಿನ ಸೌಲಭ್ಯ ಸಿಗಲಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ತುಮಕೂರು ಮಹಾನಗರಕ್ಕೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡಿದ್ದೇವೆ. ತುಮಕೂರು ನಗರವನ್ನು ಸ್ಮಾರ್ಟ್ ಸಿಟಿಗೆ ಸೇರಿಸುವ ಮೂಲಕ ಹೆಚ್ಚಿನ ಅನುದಾನವನ್ನು ನೀಡಿದ್ದೇವೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಆಸಕ್ತಿ ತೋರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಿಪಟೂರು ಬಳಿ ಎಚ್‍ಎಎಲ್ ಮೂಲಕ ಹೆಲಿಕಾಪ್ಟರ್ ತಯಾರು ಮಾಡುವ ಬಿಡಿಭಾಗಗಳ ಘಟಕವನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

ಕೇಂದ್ರ ನೀಡುತ್ತಿರುವ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳತ್ತಿಲ್ಲ. ಇಲ್ಲಿನ ಸರ್ಕಾರ ಬದಲಾಗದ ಹೊರತು ಅಭಿವೃದ್ಧಿ ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಡವರ ಮರೆತ ಕಾಂಗ್ರೆಸ್:
ಇನ್ನು ತಮ್ಮ ಭಾಷಣದುದ್ದಕ್ಕೂ ಮೋದಿ, ಕಾಂಗ್ರೆಸ್ ಯಾವತ್ತೂ ಬಡವರ ಪರವಾಗಿ ಎಂದೂ ಕೆಲಸ ಮಾಡಿಲ್ಲ. ಚುನಾವಣೆಗೂ ಮುನ್ನ ಜನತೆಗೆ ತುಪ್ಪ ಸವರುತ್ತಾ ಬಂದಿದ್ದಾರೆ. 60 ವರ್ಷ ಆಡಳಿತ ನಡೆಸಿದವರಿಗೆ ಏಕೆ ಬಡತನ ನೆನಪಾಗಲಿಲ್ಲವೆ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ