ಮೈಸೂರು, ಮೇ 5- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಕನ್ನಡದ ಖ್ಯಾತ ನಟ ದರ್ಶನ್ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ ಪ್ರಚಾರ ನಡೆಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಕಳಸ್ತವಾಡಿ, ಸಿದ್ದಲಿಂಗಪುರ, ರಮ್ಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ದರ್ಶನ್ ಸಿಎಂ ಪರ ಮತಯಾಚನೆ ಮಾಡಿದರು.
ಬೆಳಗ್ಗೆಯೇ ದರ್ಶನ್ ಹಲವಾರು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮತಬೇಟೆಗಿಳಿದು ರೋಡ್ಶೊ ನಡೆಸಿ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಗಳಲ್ಲಿ ಸಂಚರಿಸಿ ಮತಯಾಚನೆ ನಡೆಸಿದರು.
ಜೆಡಿಎಸ್ ವಿರೋಧ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಇಂದು ಪ್ರಚಾರಕ್ಕೆ ಆಗಮಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ.
ಚಾಮುಡೇಶ್ವರಿ ಕ್ಷೇತ್ರದ ನಾಗನಹಳ್ಳಿಯಲ್ಲಿ ದರ್ಶನ್ ಸಿಎಂ ಪರ ಮತಯಾಚನೆಗೆ ಆಗಮಿಸಿದ್ದರು. ದರ್ಶನ್ ನಾಗನಹಳ್ಳಿಗೆ ಕಾಲಿಡುತ್ತಿದ್ದಂತೆ ಅಲ್ಲಿನ ಕೆಲ ಗ್ರಾಮಸ್ಥರು ಹಾಗೂ ಜೆಡಿಎಸ್ ಕಾರ್ಯಕರ್ತರು ವಾಹನ ತಡೆದು ಗ್ರಾಮ ಪ್ರವೇಶಿಸದಂತೆ ಘೇರಾವ್ ಹಾಕಿದರು.
ಕಾವೇರಿ ಜಲವಿವಾದದ ಸಂಬಂಧದಲ್ಲಿ ಯಾವುದೇ ಹೇಳಿಕೆ ನೀಡದೆ, ಪ್ರತಿಭಟನೆಗೂ ಬಾರದೆ ಇಂದು ಮತಯಾಚನೆಗೆ ಬಂದಿದ್ದೀರಾ? ಹಾಗಾಗಿ ನಮ್ಮ ವಿರೋಧವಿದೆ ಎಂದು ಹೇಳಿ ಗ್ರಾಮದೊಳಗೆ ಹೋಗಲು ಬಿಡಲಿಲ್ಲ.
ಸಿದ್ದರಾಮಯ್ಯ ಪರ ಪ್ರಚಾರ ನಡೆಸದೆ ವಾಪಸ್ ಹೊರಟು ಹೋಗಿ ಎಂದು ಒಕ್ಕೊರಲ ಮನವಿ ಮಾಡಿದ ಜೆಡಿಎಸ್ ಕಾರ್ಯಕರ್ತರು, ದರ್ಶನ್ ವಿರುದ್ಧ ಘೋಷಣೆ ಕೂಗಿದರು.