ಬೀದರ, ಮೇ 04:- ಬೀದರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಬೀದರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ರಹೀಮ್ಖಾನ್ ಶುಕ್ರವಾರ (4-5-2018) ಮಿಂಚಿನ ಚುನಾವಣಾ ಪ್ರಚಾರ ನಡೆಸಿದರು.
ಯರನಳ್ಳಿ, ಇಸ್ಲಾಂಪೂರ್ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಸರ್ವ ಸಮುದಾಯಗಳ ಉದ್ಧಾರಕ್ಕಾಗಿ ಶ್ರಮಿಸಿದೆ ಎಂದು ತಿಳಿಸಿದರು.
ದೀನ ದಲಿತರು, ಶೋಷಿತರು, ಬಡವರು ಸೇರಿದಂತೆ ಸರ್ವ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದೆ. ಸರ್ವ ಸಮುದಾಯಗಳ ಅರ್ಹ ಫಲಾನುಭವಿಗಳಿಗೆ ಒಂದಲ್ಲೊಂದು ರೀತಿಯಲ್ಲಿ ಸಹಾಯಹಸ್ತ ಚಾಚಿದೆ. ಆ ಮೂಲಕ ಅವರ ಪ್ರಗತಿಗೆ ಪ್ರಯತ್ನಿಸಿದೆ ಎಂದು ತಿಳಿಸಿದರು.
ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲ ಮನ್ನಾ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಬಡವರ ಬಾಳು ಹಸನಾಗಿಸಿದೆ. ಕೆಳವರ್ಗದವರಲ್ಲಿ ಸರ್ಕಾರ ನಮ್ಮೊಂದಿಗೆ ಇದೆ ಎಂಬ ಆತ್ಮವಿಶ್ವಾಸವನ್ನು ತುಂಬಿದೆ ಎಂದು ಹೇಳಿದರು.
ಬೀದರ ಕ್ಷೇತ್ರದ ಜನ ನನಗೆ ಎರಡು ಬಾರಿ ಅವಕಾಶ ನೀಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಜನರ ಇಚ್ಛೆಯಂತೆ ಕೆಲಸ ಮಾಡಿದ್ದೇನೆ. ಕೋಟ್ಯಾಂತರ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಬೀದರಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಿದ್ದೇನೆ. ಬೀದರ ನಗರದಲ್ಲಿ ಬ್ರಿಮ್ಸ್ ಆಸ್ಪತ್ರೆ, 100 ಹಾಸಿಗೆಯ ಮಹಿಳೆಯರು ಹಾಗೂ ಮಕ್ಕಳ ಆಸ್ಪತ್ರೆ, ದಿನದ 23 ಗಂಟೆ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ಯೋಜನೆ ಕಾಮಗಾರಿಗಳು ತೀವ್ರಗತಿಯಲ್ಲಿ ನಡೆದಿವೆ ಎಂದು ತಿಳಿಸಿದರು.
ಕಡಿಮೆ ಅವಧಿಯಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ. ಮತದಾರರು ಮತ್ತೊಮ್ಮೆ ಆಶೀರ್ವದಿಸಿದರೆ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಿ ಸರ್ಕಾರದಿಂದ ಹಲವು ಹೊಸ ಯೋಜನೆಗಳನ್ನು ತಂದು ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಒಳ್ಳೆಯ ಕೆಲಸಗಳಿಗೆ ಮನ್ನಣೆ ನೀಡಿ ಮತದಾರರು ಕಾಂಗ್ರೆಸ್ಗೆ ಮತ ಚಲಾಯಿಸಬೇಕು. ಇದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೈ ಬಲಪಡಿಸಬೇಕು ಎಂದು ವಿನಂತಿಸಿದರು.
ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ ಚಿದ್ರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕುಶಾಲ ಪಾಟೀಲ ಗಾದಗಿ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚೌಹಾಣ, ಗ್ರಾಮದ ಗಣ್ಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.