ಬೆಂಗಳೂರು, ಮೇ 4-ಮತಗಟ್ಟೆ ಬೂತ್ ಗೆದ್ದರೆ ವಿಧಾನಸಭೆ ಚುನಾವಣೆ ಗೆಲ್ಲಲು ಸಾಧ್ಯ ಎಂದು ಹೇಳಿರುವ ಪ್ರಧಾನಿÀ ನರೇಂದ್ರ ಮೋದಿ, ಅದೇ ರೀತಿ ಮಹಿಳೆಯರ ಮನಸ್ಸು ಗೆದ್ದರೆ ಇಡೀ ಕುಟುಂಬದ ಮತಗಳು ಲಭಿಸುತ್ತವೆ ಎಂದು ವಿಶ್ಲೇಷಿಸಿದ್ದಾರೆ.
ನಮೋ ಆ್ಯಪ್ ಮೂಲಕ ಇಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಅವರು, ಮಹಿಳಾ ಸಬಲೀಕರಣಕ್ಕೆ ಕೇಂದ್ರ ಒತ್ತು ನೀಡಿದೆ. ಭಾರತವು ಮಹಿಳಾ ಅಭಿವೃದ್ದಿಯಿಂದ ಈಗ ವನಿತೆಯರ ನೇತೃತ್ವದ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಹೇಳಿದರು.
ತಮ್ಮ ನೇತೃತ್ವದ ಎನ್‍ಡಿಎ ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳ ಬಗ್ಗೆ ವಿವರಿಸಿದ ಪ್ರಧಾನಿ, ಮುದ್ರಾ ಯೋಜನೆಯಲ್ಲಿ 8 ಕೋಟಿ ಫಲಾನುಭವಿಗಳಿದ್ದಾರೆ. ಮುದ್ರಾ ಬ್ಯಾಂಕ್ ಯೋಜನೆಯಡಿ ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಬಡವರಿಗೆ ಉಚಿತ ಎಲ್‍ಪಿಜಿ ಯೋಜನೆಯಲ್ಲಿ 17 ಲಕ್ಷ ಮಹಿಳೆಯರಿಗೆ ಫಲಾನುಭವ ಲಭಿಸಿದೆ ಎಂದು ಅಂಕಿಅಂಶ ನೀಡಿದರು.
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ನಮ್ಮ ಹೆಣ್ಣುಮಕ್ಕಳು ಸ್ವಾವಲಂಬನೆ ಸಾಧಿಸಲು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಆಸ್ತಿ ನೋಂದಣಿ ಹೆಸರಿನಲ್ಲಿ ಪತ್ನಿ ಹೆಸರನ್ನು ಕಡ್ಡಾಯ ಮಾಡಲಾಗಿದೆ ಎಂದು ಮೋದಿ ಹೇಳಿದರು.
ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣಕ್ಕೆ ನಾವು ಆದ್ಯತೆ ನೀಡಿದ್ದೇವೆ. ಇದಕ್ಕಾಗಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಗೆಲುವಿಗೆ ಮಹಿಳೆಯರ ಮತಗಳು ಅತ್ಯಂತ ಮಹತ್ವದ್ದಾಗಿದೆ. ಇದನ್ನು ಅರಿತು ವನಿತೆಯರ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗಳಿಸಲು ಕಾರ್ಯಕರ್ತರು ಶ್ರಮಿಸಬೇಕು. ಮತ ಕೇಂದ್ರದ ಬೂತ್ ಗೆಲ್ಲಲು ಗಮನಹರಿಸಬೇಕು. ಅಲ್ಲಿ ಗೆದ್ದರೆ, ವಿಧಾನಸಭಾ ಕ್ಷೇತ್ರದಲ್ಲಿ ಜಯಸಾಧಿಸಿದಂತೆ. ಕುಟುಂಬಗಳ ಮತಗಳನ್ನು ಗಳಿಸಲು ಹೆಂಗಳೆಯರ ಮನಗೆಲ್ಲಬೇಕು ಎಂದು ಅವರು ಕರೆ ನೀಡಿದರು.
ವೀರಾಗ್ರಣಿಯರಾದ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಅವರನ್ನು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.