ಮೇ ೧ ೨೦೧೮, ಬೆಂಗಳೂರು: ಹಿಂದುತ್ವವೇ ಆರೆಸ್ಸೆಸ್ಸಿನ ಹೆಗ್ಗುರುತು. ಹಿಂದುತ್ವ ಎನ್ನುವುದು ಒಂದು ಪೂಜಾ ಪದ್ಧತಿಯಲ್ಲ, ಇದೊಂದು ಜೀವನ ಪದ್ಧತಿ. ತನ್ನದೇ ಸರಿ ಎಂಬ ಸಂಕುಚಿತ ವಿಚಾರದ ಒಂದು ರಿಲಿಜನ್ ಇದಲ್ಲ. ಬದಲಿಗೆ, ದೇವನೊಬ್ಬ ನಾಮ ಹಲವು ಎಂಬುದು ಹಿಂದುತ್ವದ ವಿಚಾರ ಎಂದು ಪ್ರಜ್ಞಾಪ್ರವಾಹದ ಕರ್ನಾಟಕ, ಆಂಧ್ರ, ತೆಲಂಗಾಣಗಳ ಕ್ಷೇತ್ರೀಯ ಸಂಯೋಜಕ ರಘುನಂದನ್ ಅಭಿಪ್ರಾಯಪಟ್ಟರು. ಚನ್ನೇನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ 21 ದಿನಗಳ ಅವಧಿಯ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಇನ್ನೊಬ್ಬರ ಪೂಜಾಪದ್ಧತಿಯನ್ನು ತಿರಸ್ಕರಿಸಿದ, ಅವರ ಪೂಜಾಸ್ಥಾನಗಳನ್ನು ಧ್ವಂಸ ಮಾಡಿದ ಇತಿಹಾಸ ಹಿಂದುಗಳದ್ದಲ್ಲ. ಬೇರೆ ಬೇರೆ ದೇಶಗಳಿಗೆ ಹೋದ ಹಿಂದುಗಳು ನಮ್ಮಲ್ಲಿರುವ ಒಳ್ಳೆಯ ಆಚಾರ-ವಿಚಾರಗಳನ್ನು ಅಲ್ಲಿನವರಿಗೆ ಕಲಿಸಿದರು. ಇಂದು ಜಗತ್ತಿನ ವಿವಿಧ ದೇಶಗಳು ಸೈನಿಕ ಬಲವನ್ನು ಬಳಸಿ, ಎಲ್ಲರನ್ನೂ ಗೆಲ್ಲುತ್ತಿದ್ದರೆ, ನಾವು ಸೈನ್ಯ ಕಳುಹಿಸದೇ, ಸಾವಿರಾರು ವರ್ಷಗಳ ಕಾಲ ನಮ್ಮ ಸಂಸ್ಕೃತಿಯ ಮೂಲಕವೇ ಪ್ರಪಂಚವನ್ನು ಆಳಿದವರು. ಇದು ನಮ್ಮ ಹೆಮ್ಮೆ : ಶ್ರೀ ರಘುನಂದನ್
ಹಿಂದು ಧರ್ಮದ ಅಗತ್ಯ ಇಂದು ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೇ ಇದೆ. ಜಗತ್ತೆಲ್ಲ ದೈವವೇ, ಇದನ್ನು ಹಾಳು ಮಾಡುವ ಹಕ್ಕು ನಮಗಿಲ್ಲ ಎಂಬುದು ಹಿಂದು ಧರ್ಮದ ವಿಚಾರ. ಆದ್ದರಿಂದ ಪ್ರಕೃತಿಯನ್ನು ಆರಾಧಿಸುವ ಪದ್ಧತಿ ಇಲ್ಲಿ ಬೆಳೆದಿದೆ. ಪ್ರಾಣಿ-ಪಕ್ಷಿಗಳನ್ನು, ಪ್ರಕೃತಿಯನ್ನು ದೇವರನ್ನಾಗಿ ಕಾಣುತ್ತೇವೆ ನಾವು. ತನಗೆ ಅಗತ್ಯವಿರುವಷ್ಟೇ ಉಪಯೋಗಿಸಬೇಕು ಎಂದು ನಮ್ಮ ಸಂಸ್ಕೃತಿ ನಮಗೆ ಹೇಳಿಕೊಟ್ಟಿದೆ. ಬಳಸಿ-ಬಿಸಾಡುವ ಪದ್ಧತಿ ನಮ್ಮದಲ್ಲ. ಯಾವುದೇ ವಸ್ತುವಾದರೂ ಅದನ್ನೇ ಪುನರ್ಬಳಕೆ (ರಿಸೈಕಲ್) ಮಾಡುವ ಪದ್ಧತಿ ನಮ್ಮಲ್ಲಿ ಮೊದಲಿನಿಂದಲೂ ಇದೆ. ಕಂಡದ್ದನ್ನೆಲ್ಲ ಕೊಳ್ಳುವ, ಪ್ರಕೃತಿ ಇರುವುದು ತನಗಾಗಿಯೇ ಎಂದು ಭಾವಿಸುವ ಪಶ್ಚಿಮದ ಭೋಗವಾದಕ್ಕಿಂತ ಇದು ವಿಭಿನ್ನವಾದದ್ದು. ಇಂತಹ ಶ್ರೇಷ್ಠ ವಿಚಾರಗಳಿಂದಾಗಿ ಕಳ್ಳಕಾಕರಿಲ್ಲದ, ಮೋಸ-ವಂಚನೆಗಳಿಲ್ಲದ ಸಮಾಜ ನಮ್ಮದಾಗಿತ್ತು. ಅದಕ್ಕೆ ನಮ್ಮಲ್ಲಿದ್ದ ಧರ್ಮಾಧಾರಿತ ಶಿಕ್ಷಣವೇ ಕಾರಣ ಎನ್ನುವುದನ್ನು ಮೆಕಾಲೆ ಮೊದಲಾದ ಪಾಶ್ಚಾತ್ಯರು ಗುರುತಿಸಿದ್ದಾರೆ.
ಕ್ಯಾಪಿಟಲಿಸಂ ವ್ಯಕ್ತಿವಾದವನ್ನು ಪೋಷಿಸಿ, ಬೆಳೆಸಿದೆ. ಭೌತಿಕ ಶ್ರೀಮಂತಿಕೆ ಅಮೇರಿಕಾ ಮೊದಲಾದ ದೇಶಗಳಲ್ಲಿದ್ದರೂ, ಜನರಲ್ಲಿ ನೆಮ್ಮದಿ ಇಲ್ಲ. ಸ್ವಕೇಂದ್ರಿತ ಚಿಂತನೆ ಮಿತಿಮೀರಿ, ಜನರ ಮಾನಸಿಕ ಸ್ವಾಸ್ಥ್ಯವೇ ಹಾಳಾಗಿದೆ. ರಷ್ಯಾ ಮೊದಲಾದ ಕಮ್ಯುನಿಸ್ಟ್ ದೇಶಗಳಲ್ಲಿ ಸೈನಿಕ ಕ್ರಾಂತಿಯ ಮೂಲಕ ಸಮಾನತೆಯನ್ನು ತರುವ ಪ್ರಯತ್ನಗಳು ನಡೆದವು. ಆದರೆ, ಅವೂ ಹೆಚ್ಚು ಕಾಲ ಉಳಿಯಲಿಲ್ಲ. ಆದರೆ, ನಾವೆಲ್ಲರೂ ಒಂದು ಕುಟುಂಬ ಎಂಬ ಚಿಂತನೆಯನ್ನು ಅಳವಡಿಸಿಕೊಂಡ ಹಿಂದುಗಳು ಮಾತ್ರ ದೀರ್ಘಕಾಲದಿಂದಲೂ ತಮ್ಮ ಸಮಾಜ ಸಂಸ್ಕೃತಿಯನ್ನು ಉಳಿಸಿಕೊಂಡು ಬರಲು ಸಾಧ್ಯವಾಗಿದೆ. ನನ್ನ ಮಾರ್ಗವೇ ಸರಿ ಎಂಬ ಮತಾಂಧ ಸಿದ್ಧಾಂತಗಳು ಎಲ್ಲೂ ಯಶಸ್ವಿಯಾಗಿಲ್ಲ. ಅವುಗಳು ಸಂಘರ್ಷಕ್ಕೆಡೆಮಾಡಿಕೊಟ್ಟಿವೆಯೇ ಹೊರತು, ಸಾಮರಸ್ಯವನ್ನು ತಂದುಕೊಟ್ಟಿಲ್ಲ. ಎಲ್ಲರಿಗೂ ಯಾವಾಗಲೂ ಒಳ್ಳೆಯದನ್ನು ಬಯಸುವ ಇಂತಹ ಚಿಂತನೆಯ ಒಂದು ಉದಾಹರಣೆ ಯೋಗ. ಇದು ಎಲ್ಲರನ್ನೂ ಜೋಡಿಸುವ ಸಾಧನ. ನಾನೊಬ್ಬನೇ ಚೆನ್ನಾಗಿದ್ದರೆ ಸಾಲದು, ಎಲ್ಲರೂ ಚೆನ್ನಾಗಿರಬೇಕು ಎಂಬ ಚಿಂತನೆಯಿರುವುದರಿಂದಲೇ, ನಮ್ಮಲ್ಲಿ ಕುಟುಂಬ ವ್ಯವಸ್ಥೆ ಗಟ್ಟಿಯಾಗಿದೆ. ಅದು ನಮ್ಮ ಸಂಬಂಧಗಳನ್ನು ಗಟ್ಟಿಯಾಗಿಟ್ಟಿದೆ. ಕುಟುಂಬದ ಸದಸ್ಯರಿಗೆ ಈ ಸಂಬಂಧಗಳು ಭಾವನಾತ್ಮಕ ಬಲವನ್ನು ನೀಡುತ್ತವೆ. ಇಂತಹ ಶ್ರೇಷ್ಠ ಸಂಸ್ಕೃತಿಯನ್ನು, ಧರ್ಮವನ್ನು ನಮ್ಮ ಜೀವನದಲ್ಲಿ ಆಚರಿಸುವ ಮತ್ತು ಮುಂದಿನ ತಲೆಮಾರಿಗೆ ದಾಟಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಚಾರಿತ್ರ್ಯದ ಆಧಾರದ ಮೇಲೆ ಜಗತ್ತನ್ನು ನಾವು ಪುನಃ ಗೆಲ್ಲಬೇಕಾಗಿದೆ. ನಮ್ಮ ಹಿಂದು ಜೀವನ ಪದ್ಧತಿಯ ಬಗ್ಗೆ ಎಲ್ಲೆಡೆ ಗೌರವ, ಆಸಕ್ತಿಗಳು ಹೆಚ್ಚುತ್ತಿವೆ. ಒಂದೇ ದಾರಿಯಲ್ಲ, ಹಲವು ದಾರಿಗಳಿವೆ ಎಂಬ ನಮ್ಮ ವಿಚಾರವನ್ನು ಜಗತ್ತು ಒಪ್ಪುತ್ತಿದೆ. ಮುಂದಿನ ದಿನಗಳು ಖಂಡಿತಾ ಭಾರತದ್ದೇ ಎಂಬುದು ರಘುನಂದನ್ ಅವರ ಖಚಿತ ನುಡಿ.
ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾ| ಎನ್. ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ರಿಟಿಷರ ಗುಲಾಮಗಿರಿಯಿಂದ ನಮಗೆ ಮುಕ್ತಿ ಸಿಕ್ಕಿದ್ದರೂ ಮಾನಸಿಕ ಗುಲಾಮಿತನ ಇನ್ನೂ ನಮ್ಮ ಸಮಾಜದಲ್ಲಿರುವುದನ್ನು ನಾವು ಕಾಣುತ್ತೇವೆ. ಯಾರನ್ನು ನಾವು ಆದರ್ಶಪುರುಷರೆಂದು ಗೌರವಿಸುತ್ತೇವೋ ಅಂತಹ ಮಹಾಪುರುಷರನ್ನು ಅವಮಾನಿಸುವ ಕೆಲಸ ನಮ್ಮವರಿಂದಲೇ ನಡೆಯುತ್ತಿದೆ. ಭಗವದ್ಗೀತೆ ಹಿಂಸೆಯನ್ನು ಪ್ರಚೋದಿಸುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ, ಇತಿಹಾಸ, ಧರ್ಮಗಳ ಬಗ್ಗೆ ನಮ್ಮ ಯುವಜನರಿಗೆ ಶಿಕ್ಷಣ ನೀಡಿ, ಅವರನ್ನು ಮನಸ್ಸನ್ನು ದೃಢಗೊಳಿಸಬೇಕಾಗಿದೆ, ದೇಶ-ಧರ್ಮಗಳ ಬಗ್ಗೆ ಹೆಮ್ಮೆ ಮೂಡಿಸಬೇಕಾಗಿದೆ. ರಾ. ಸ್ವ. ಸಂಘ ನಡೆಯುತ್ತಿರುವ ದಾರಿ ಸರಿಯಾದದ್ದು. ಸಮಾಜದ ಟೀಕೆ ಟಿಪ್ಪಣಿಗಳಿಗೆ ಕುಂದದೇ, ಸ್ವಯಂಸೇವಕರು ತಮ್ಮ ಧರ್ಮದ ದಾರಿಯಲ್ಲಿ ಮುನ್ನಡೆಯಬೇಕು ಎಂದು ಅವರು ಕರೆ ನೀಡಿದರು. ಭಾರತವನ್ನು ಪುನಃ ವಿಶ್ವಗುರುವಾಗಿ ಮಾಡುವ ತಮ್ಮ ಕಾರ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಂಘ ಶಿಕ್ಷಾವರ್ಗದ ವರ್ಗಾಧಿಕಾರಿ ವೆಂಕಟೇಶ ಹೆಗ್ಡೆ ಅವರು ವರ್ಗದ ವರದಿಯನ್ನು ಪ್ರಸ್ತುತಪಡಿಸಿದರು. ಕರ್ನಾಟಕ ದಕ್ಷಿಣ ಪ್ರಾಂತದ ವಿವಿಧ ಜಿಲ್ಲೆಗಳಿಂದ ಒಟ್ಟು 497 ಸ್ವಯಂಸೇವಕರು 21 ದಿನದ ಈ ಶಿಕ್ಷಾ ವರ್ಗದಲ್ಲಿ ಭಾಗವಹಿಸಿದ್ದರು. ಶಾರೀರಿಕ ಶಿಕ್ಷಣ, ಬೌದ್ಧಿಕ ಶಿಕ್ಷಣ, ಸೇವೆ, ಗ್ರಾಮ ವಿಕಾಸ ಮೊದಲಾದ ವಿಷಯಗಳಲ್ಲಿ ಶಿಕ್ಷಾರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದು ಅವರು ತಮ್ಮ ವರದಿಯಲ್ಲಿ ತಿಳಿಸಿದರು.
ಸಂಘ ಶಿಕ್ಷಾವರ್ಗದ ವರ್ಗಾಧಿಕಾರಿ ವೆಂಕಟೇಶ ಹೆಗ್ಡೆ ಅವರು ವರ್ಗದ ವರದಿಯನ್ನು ಪ್ರಸ್ತುತಪಡಿಸಿದರು. ಕರ್ನಾಟಕ ದಕ್ಷಿಣ ಪ್ರಾಂತದ ವಿವಿಧ ಜಿಲ್ಲೆಗಳಿಂದ ಒಟ್ಟು 497 ಸ್ವಯಂಸೇವಕರು 21 ದಿನದ ಈ ಶಿಕ್ಷಾ ವರ್ಗದಲ್ಲಿ ಭಾಗವಹಿಸಿದ್ದರು. ಶಾರೀರಿಕ ಶಿಕ್ಷಣ, ಬೌದ್ಧಿಕ ಶಿಕ್ಷಣ, ಸೇವೆ, ಗ್ರಾಮ ವಿಕಾಸ ಮೊದಲಾದ ವಿಷಯಗಳಲ್ಲಿ ಶಿಕ್ಷಾರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದು ಅವರು ತಮ್ಮ ವರದಿಯಲ್ಲಿ ತಿಳಿಸಿದರು.
Rtd Karnataka HC Justice N Kumar
Sri C R Mukunda, Sri Na Thippeswamy, Sri B V Shreedharaswamy off the dais in the Varga.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕ್ ವಿ. ನಾಗರಾಜ್, ಕರ್ನಾಟಕ ದಕ್ಷಿಣ ಪ್ರಾಂತದ ಸಂಘಚಾಲಕ್ ಮಾ. ವೆಂಕಟರಾಮು, ಸಹ ಸರಕಾರ್ಯವಾಹ ಸಿ. ಆರ್. ಮುಕುಂದ, ದಕ್ಷಿಣ ಮಧ್ಯ ಕ್ಷೇತ್ರದ ಸಹ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ದಕ್ಷಿಣ ಮಧ್ಯ ಕ್ಷೇತ್ರದ ಬೌದ್ಧಿಕ್ ಪ್ರಮುಖ್ ಬಿ. ವಿ. ಶ್ರೀಧರಸ್ವಾಮಿ, ಲೇಖಕ ಚಂದ್ರಶೇಖರ ಭಂಡಾರಿ, ಕಾ. ಶ್ರೀ. ನಾಗರಾಜ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.