ದಾವಣಗೆರೆ, ಮೇ 4- ಬಿಎಸ್ವೈಗೆ ಬುದ್ಧಿ ಭ್ರಮಣೆ ಆಗಿದೆ. ಸಿಎಂ ಆಗುವ ಪ್ರಮಾಣ ವಚನ ಸಮಯ ನಿಗದಿ ಮಾಡಿದ್ದಾರೆ. ಸಿಲಿಂಡರ್ ಹಾಗೂ ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ಇದೇ ಅಚ್ಛೇ ದಿನ್ ಎಂದು ಕೀವ್ ಜೂಟ್ ಬೋಲ್ ರಹೇ ಹೈ. ಕಿತನಾ ಜೂಟ್ ಬೋಲ್ ರಹೆ ಹೈ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿಯಲ್ಲಿ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಚುನಾವಣೆ ಮಹತ್ವದ ಚುನಾವಣೆಯಾಗಿದೆ. ದೇಶದ ಭವಿಷ್ಯದ ರಾಜಕಾರಣಕ್ಕೆ ಮತದಾರರು ತೆಗೆದುಕೊಳ್ಳುವ ನಿರ್ಧಾರ ಐತಿಹಾಸಿಕವಾಗಲಿದೆ. ಬಿಜೆಪಿ ಐದು ವರ್ಷ ಅಧಿಕಾರದಲ್ಲಿತ್ತು. ಮೂರು ಜನ ಸಿಎಂ ಆಗಿದ್ದರು. ಇಂತಹ ಇತಿಹಾಸ ಯಾವ ಪಕ್ಷದಲ್ಲೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರದಲ್ಲಿದ್ದಾಗ ಸಾಲ ಮನ್ನಾ ಮಾಡಲಾಗದವರು ಈಗ ರೈತರ ಸಾಲ ಮನ್ನಾ ನಾಟಕವಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅವರೇ ಮನ್ನಾ ಮಾಡಬಹುದಲ್ಲ. ವೋಟಿಗಾಗಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿಯವರಿಗೆ ನಾಚಿಕೆಯಾಗಬೇಕು. ನಮ್ಮ ಕಾರ್ಯಕ್ರಮಗಳನ್ನು ಕಾಪಿ ಮಾಡಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೊರತರಲಾಗಿದೆ. ಇಂದಿರಾ ಕ್ಯಾಂಟಿನ್ ಕಾಪಿ ಮಾಡಿ ಅನ್ನಪೂರ್ಣ ಎಂದು ಹೆಸರಿಟ್ಟಿದ್ದಾರೆ. ಬಿಜೆಪಿ ನಡಿಗೆ ದಲಿತರ ಮನೆಗೆ ಎಂದು ಹೇಳಿ ಹೊಟೇಲ್ನಲ್ಲಿ ತಿಂಡಿ ತಂದು ತಿನ್ನುವ ಜಾಯಮಾನ ಅವರದ್ದು. ದಲಿತರನ್ನು ನಿಂದಿಸುವ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಅವರನ್ನು ಸಂಪುಟದಿಂದ ಕೈ ಬಿಡಲಿಲ್ಲ. ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಸಮಯದಲ್ಲಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಕುರಿಮರಿ ಕಾಣಿಕೆ ನೀಡಿದ್ದು, ನೆರೆದಿದ್ದ ಅಪಾರ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಕುರಿಮರಿಯನ್ನು ಮೇಲೆತ್ತಿ ತೋರಿಸಿದರು.
ಇದೇ ವೇಳೆ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ವಡ್ನಾಳ್ ರಾಜಣ್ಣ ಪರ ಮತಯಾಚನೆ ಮಾಡಿದರು.