ಜೆಡಿಎಸ್, ಬಿಜೆಪಿ ಜತೆ ಹೊಂದಾಣಿಕೆ ಇಲ್ಲ: ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಖ್

ಬೆಂಗಳೂರು, ಮೇ 4- ರಾಜ್ಯದಲ್ಲಿ ಜೆಡಿಎಸ್, ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಖ್ ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ 115 ಸ್ಥಾನಗಳನ್ನು ಗಳಿಸಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಾಗಿ ಜೆಡಿಎಸ್ ವರಿಷ್ಠ ಸ್ಪಷ್ಟಪಡಿಸಿದ್ದಾರೆ ಎಂದ ಅವರು, ಪಕ್ಷೇತರರು ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆಯುವ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದರು.

ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಆಧಾರ ರಹಿತ. ಅಂತಹ ಯಾವುದೇ ಒಪ್ಪಂದ ಆಗಿಲ್ಲ ಎಂದರು.

ಕಳೆದ ಐದು ವರ್ಷದ ಅವಧಿಯಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರ ಹಿತಾಸಕ್ತಿ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆ ತಡೆಯಲು ಅವರಿಗೆ ಸಾಧ್ಯವಾಗಿಲ್ಲ. ಆದರೆ, ಕಾಂಗ್ರೆಸ್ ಪಕ್ಷವೇ ವಿಜಯಪುರ-ಕೊಪ್ಪಳ ಸೇರಿದಂತೆ ಹಲವು ಕಡೆ ಒಳ ಒಪ್ಪಂದವನ್ನು ಬಿಜೆಪಿ ಜತೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಮುಸ್ಲಿಮರಿಗೆ ಬೇಕಾಗಿರುವುದು ಟಿಪ್ಪು ಜಯಂತಿ ಮತ್ತು ಬಹಮನಿ ಉತ್ಸವಗಳಲ್ಲ. ಉನ್ನತ ಶಿಕ್ಷಣ, ಉದ್ಯೋಗ, ಆರೋಗ್ಯ ಬೇಕು. ಅಲಿಗಢ ವಿಶ್ವವಿದ್ಯಾಲಯದ ಮಾದರಿಯಲ್ಲಿ ರಾಜ್ಯದಲ್ಲಿ ಮುಸ್ಲಿಂ ವಿವಿ ಸ್ಥಾಪನೆ ಮಾಡಬೇಕು. ಮುಸ್ಲಿಮರ ಏಳಿಗೆಗಾಗಿ ರಾಜೇಂದರ್ ಸಾಚಾರ್ ವರದಿ ಜಾರಿಗೆ ತರಬೇಕು. ಇವೆರಡನ್ನೂ ಜೆಡಿಎಸ್ ಅಧಿಕಾರಕ್ಕೆ ಬಂದ ತಕ್ಷಣ ಮಾಡಲಾಗುತ್ತದೆ ಎಂದು ಹೇಳಿದರು.

ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ಮನಗಂಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ನಡುಕ ಉಂಟಾಗಿ ಆಧಾರ ರಹಿತ ಆರೋಪ ಮಾಡುತ್ತಿವೆ ಎಂದು ದೂರಿದರು.
ಸಂಸದ ಅಸಾದ್‍ವುದ್ದೀನ್ ಒವೈಸಿ ಜೆಡಿಎಸ್‍ಗೆ ಬೆಂಬಲ ನೀಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ಅವರದ್ದೊಂದು ಪ್ರಾದೇಶಿಕ ಪಕ್ಷ. ಹಾಗಾಗಿ ಅವರು ಜೆಡಿಎಸ್‍ಗೆ ಬೆಂಬಲ ನೀಡಿದ್ದಾರೆ ಎಂದರು.

ಜಫ್ರುಲ್ಲಾಖಾನ್ ಮಾತನಾಡಿ, ಬಿಜೆಪಿ ಜತೆ ಒಳ ಒಪ್ಪಂದವನ್ನು ಜೆಡಿಎಸ್ ಮಾಡಿಕೊಂಡಿಲ್ಲ. ಆದರೆ, 1948ರಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ.
ಬಿಜೆಪಿ ಆಡಳಿತವಿದ್ದಾಗ ಕಾಂಗ್ರೆಸ್ ಯಾವುದೇ ಹಗರಣವನ್ನು ಬಯಲಿಗೆ ಎಳೆದಿಲ್ಲ. ಅದೇ ರೀತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಹಗರಣ ಬಯಲಿಗೆ ಎಳೆಯಲಿಲ್ಲ. ಇದು ಟೈಯಪ್ ಅಲ್ಲದೆ ಮತ್ತೇನು. ನಾವು ಬಿಎಸ್‍ಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಬಸವಣ್ಣನವರ ವಚನ, ವಿಶ್ವೇಶ್ವರಯ್ಯನವರ ಹೆಸರನ್ನುಸರಿಯಾಗಿ ಉಚ್ಚಾರಣೆ ಮಾಡದ ಅಪ್ರಬುದ್ಧ ನಾಯಕ. ಇಂತಹವರು ನಮ್ಮ ನಾಯಕರಾಗಬೇಕೆ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ