ದಾವಣಗೆರೆ, ಮೇ 3- ಮತದಾನ ಸಮೀಪಿಸುತ್ತಿದ್ದಂತೆ ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿಯವರು ಸುಳ್ಳು ಭರವಸೆ ನೀಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದೆ, ಚುನಾವಣೆ ಕಾಲದಲ್ಲಿ ಮಾತ್ರ ಸುಳ್ಳು ಭರವಸೆಗಳನ್ನು ನೀಡುತ್ತಿರುವುದನ್ನು ಜನ ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚುನಾವಣಾ ಪ್ರಚಾರದ ನಡುವೆ ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನ ಮಾಡಲು ಸಾಧ್ಯವಿಲ್ಲ. ನಾನು ನೋಟು ಪ್ರಿಂಟ್ ಮಾಡುವ ಮಿಷನ್ ಇಟ್ಟುಕೊಂಡಿಲ್ಲ ಎಂದಿದ್ದರು. ಕೇಂದ್ರದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ಇಷ್ಟು ದಿನವಾದರೂ ಸಾಲ ಮನ್ನ ಮಾಡಿಲ್ಲ. ರಾಜ್ಯದ ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸುಮಾರು 42ಸಾವಿರ ಕೋಟಿ ಸಾಲ ನೀಡಲಾಗಿದೆ. ನಾವು ಸಹಕಾರ ಸಂಘಗಳ ಮೂಲಕ ನೀಡಿದ್ದ ಸಾಲ ಮನ್ನ ಮಾಡಿದ್ದೇವೆ. ಕೇಂದ್ರ ಸರ್ಕಾರ ಈವರೆಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ನೀಡಿದ್ದ ಸಾಲವನ್ನು ಏಕೆ ಮನ್ನ ಮಾಡಿಲ್ಲ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ವಿಷಯದಲ್ಲಿ ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರುವಂತೆ ಪ್ರಧಾನಿ ಅವರಿಗೆ ನಾನು ಸವಾಲು ಹಾಕಿದ್ದೆ. ಅದಕ್ಕೆ ಈವರೆಗೂ ಪ್ರಧಾನಿ ಪ್ರತಿಕ್ರಿಯಿಸಿಲ್ಲ ಎಂಬ ಸಿಎಂ ಹೇಳಿಕೆಗೆ ಮೋದಿ ಬದಲಾಗಿ ಶ್ರೀರಾಮುಲು ತಾನೇ ಚರ್ಚೆಗೆ ಬರುವುದಾಗಿ ಪ್ರತಿ ಸವಾಲು ಹಾಕಿರುವುದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆತ ಪಾಪ ಹುಂಬ. ಆತನಿಗೆ ಏನೂ ಗೊತ್ತಿಲ್ಲ. ಸರಿಯಾಗಿ ಕನ್ನಡವೇ ಗೊತ್ತಿಲ್ಲ. ಅವರೊಂದಿಗೆ ಏನು ಚರ್ಚೆ ಮಾಡುವುದು ಎಂದು ಹೇಳಿದರು.
ಬಾದಾಮಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಶ್ರೀರಾಮುಲು ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಅವರ ಮಾತಿಗೆ ಅಷ್ಟು ಮಹತ್ವ ಕೊಡುವ ಅಗತ್ಯವಿಲ್ಲ. ಮೊದಲು ಆತ ಸರಿಯಾಗಿ ಕನ್ನಡ ಕಲಿಯಲಿ. ಇಷ್ಟು ವರ್ಷವಾದರೂ ಸರಿಯಾಗಿ ಕನ್ನಡವನ್ನೇ ಕಲಿತಿಲ್ಲ. ಮೊದಲು ಕನ್ನಡ ಕಲಿತುಕೊಳ್ಳಲಿ ಎಂದು ಲೇವಡಿ ಮಾಡಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಕ್ಕೆ ಎಷ್ಟು ಬಾರಿ ಬಂದರೂ ಅದರಿಂದ ಕಾಂಗ್ರೆಸ್ಗೇ ಲಾಭವಾಗಲಿದೆ. ಅವರು ರಾಜ್ಯಕ್ಕೆ ಬಂದು ಹೆಚ್ಚು ಹೆಚ್ಚು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದ್ದಕ್ಕಿದ್ದ ಹಾಗೆ ಪ್ರೀತಿ ಉಕ್ಕಿ ಬಂದಿರುವುದು ನಾಟಕ ಎಂದು ಛೇಡಿಸಿದರು.
ಲೋಕಸಭೆ ಚುನಾವಣೆ ವೇಳೆ ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಸೇರಿಸಬೇಕೆಂದು ಇದೇ ಮೋದಿ ಹೇಳಿದ್ದರು. ಈಗ ಕರ್ನಾಟಕ ಚುನಾವಣೆ ವೇಳೆ ದೇವೇಗೌಡರನ್ನು ಹೊಗಳುತ್ತಿದ್ದಾರೆ. ಇದರಿಂದ ಮೋದಿ ರಾಜ್ಯದ ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆ ಅವರು ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.