ಹಾಸನ, ಮೇ 3- ಕಾವೇರಿ ವಿಷಯದಲ್ಲಿ ರಾಜಕೀಯ ಸರಿಯಲ್ಲ. ಯಾವೊಬ್ಬ ನಟ, ರಾಜಕಾರಣಿಗಳ ಹೇಳಿಕೆಗಳಿಂದ ಏನೊಂದೂ ಪ್ರಯೋಜನವಿಲ್ಲ. ಎಲ್ಲರೂ ಕುಳಿತು ಚರ್ಚೆ ಮಾಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಚಿತ್ರನಟ ಪ್ರಕಾಶ್ ರೈ ಹೇಳಿದರು.
ಹಾಸನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಷಯದಲ್ಲಿ ದಾಂಧಲೆ ಯಾರಿಗೆ ಬೇಕಾಗಿದೆ. ಗಲಾಟೆ ಮಾಡುವುದರಿಂದ ಜನರು ಕಷ್ಟ ಅನುಭವಿಸುತ್ತಾರೆ. ಮಳೆ ನೀರು ಸಮೃದ್ಧವಾಗಿರುವಾಗ ಕಾವೇರಿ ಸಮಸ್ಯೆ ನೆನಪಾಗುವುದಿಲ್ಲ. ಆದರೆ, ಈಗ ಕಾವೇರಿ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ಪರಿಹಾರಕ್ಕೋಸ್ಕರ ಹೋರಾಟ ಮಾಡಬೇಕು. ಪ್ರಚಾರಕ್ಕಾಗಿ ಹೋರಾಟ ಮಾಡಬಾರದು ಎಂದು ರೈ ಹೇಳಿದರು.
ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ ಮಾಡಿ ಕೆಲಸ ಮಾಡಿಸಿಕೊಳ್ಳಬೇಕು. ನನ್ನ ಮೇಲೆ ಅನಾವಶ್ಯಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಸಕ್ರಿಯ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ ಪ್ರಕಾಶ್ ರೈ ಮುಂದಿನ ರಾಜಕೀಯ ಬೆಳವಣಿಗೆ ನೋಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಒಂದು ಪಕ್ಷಕ್ಕೆ ನಾನು ಕೆಲಸ ಮಾಡುತ್ತಿಲ್ಲ. ಬಿಜೆಪಿಯಲ್ಲಿ ಯಾವುದೇ ಸಿದ್ಧಾಂತವಿಲ್ಲ. ಯಾವುದೋ ಒಂದು ಧರ್ಮದ ಆಧಾರದ ಮೇಲೆ ನಡೆಯುತ್ತಿದೆ. ಒಂದು ಧರ್ಮದ ಪರ ನಡೆಯುವ ಪಕ್ಷದ ನಡೆ ಸರಿಯಲ್ಲ. ಹಾಗೆ ಹೇಳಿದರೆ ನನ್ನ ಮೇಲೆ ಧರ್ಮ ವಿರೋಧಿ ಎಂಬ ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಎಂದು ಹೇಳಿದರು.
ಎಲ್ಲರೂ ಕಳ್ಳರೇ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ವಿರುದ್ಧ ಮಾತನಾಡಿದ ತೃಪ್ತಿ ಇದೆ. ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ನನ್ನ ಖಾಸಗಿ ವಿಷಯಕ್ಕೆ ಯಾರೇ ತಲೆ ಹಾಕಿದರೂ ನಾನು ಸುಮ್ಮನಿರಲು ಸಾಧ್ಯವಿಲ್ಲ. ಬಿಜೆಪಿಯವರು ಅಂತಹ ಕೆಲಸ ಮಾಡುತ್ತಿದ್ದಾರೆ. ಮೋದಿ ವಿರುದ್ಧ ಮಾತನಾಡಿ ಪ್ರಚಾರ ಪಡೆಯುವ ಅಗತ್ಯ ನನಗಿಲ್ಲ. ನಾನೊಬ್ಬ ಚಿತ್ರನಟ. ಅಷ್ಟೇ ಸಾಕು, ಸಮಸ್ಯೆಯ ಮೂಲ ಕಾರಣ ತಂದು ಜನರ ಮುಂದಿಡುವ ಕೆಲಸವಾಗುತ್ತಿದೆ. ಆದರೆ, ಅದು ಕೋಮುವಾದವಲ್ಲ, ಮನುಷ್ಯ ಧರ್ಮ ಶ್ರೇಷ್ಠ ಎಂದು ಅವರು ಅಭಿಪ್ರಾಯಪಟ್ಟರು.