ಹುಬ್ಬಳ್ಳಿ, ಮೇ 2-ಬಿಜೆಪಿಯಲ್ಲಿ ಎಲ್ಲರೂ ಒಟ್ಟಾಗಿದ್ದಿದ್ದರೆ ಯಡಿಯೂರಪ್ಪ ಮಗ ವಿಜಯೇಂದ್ರನಿಗೆ ಟಿಕೆಟ್ ಕೈ ತಪ್ಪುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.
ಉತ್ತರ ಕರ್ನಾಟಕದಲ್ಲಿ ಪ್ರಚಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಡಿಯೂರಪ್ಪ ಮಗನಿಗೆ ಟಿಕೆಟ್ ತಪ್ಪಿಸಿದವರು ಯಾರು ಎಂದು ಹೇಳಲಿ, ಬಿಜೆಪಿಯ ಅನಂತ್ಕುಮಾರ್, ಶೆಟ್ಟರ್, ಈಶ್ವರಪ್ಪ ಸೇರಿ ಟಿಕೆಟ್ ತಪ್ಪಿಸಿದ್ದಾರೆ. ಒಂದು ತಿಂಗಳ ಹಿಂದೆಯೇ ವಿಜಯೇಂದ್ರ ವರುಣ ಕ್ಷೇತ್ರದಲ್ಲಿ ಮನೆ ಮಾಡಿ ಪ್ರಚಾರ ಮಾಡಿದ್ದರು. ಅಪ್ಪ ಹಾಗೂ ಹೈಕಮಾಂಡ್ ಹೇಳಿದಂತೆ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದರು. ಆದರೆ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿದಿದ್ದರೆ ಟಿಕೆಟ್ ತಪ್ಪುತ್ತಿರಲಿಲ್ಲ ಎಂದರು.
ನಿರೀಕ್ಷೆಗೂ ಮೀರಿ ಈ ಭಾಗದಲ್ಲಿ ಜನಸ್ಪಂದನೆ ಸಿಗುತ್ತಿದೆ. ನಮ್ಮ ಯೋಜನೆಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ಈ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದರೆ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ರಾಜ್ಯಾದ್ಯಂತ ಪ್ರಚಾರ ಕೈಗೊಂಡಿದ್ದಾರೆ. ನಾವೆಲ್ಲ ಒಟ್ಟಾಗಿದ್ದೇವೆ ಎಂದು ಹೇಳಿದರು.
ಮೋದಿಯವರು ಲೋಕಸಭೆ ಚುನಾವಣೆ ವೇಳೆ ದೇವೇಗೌಡರಿಗೆ ವೃದ್ಧಾಶ್ರಮಕ್ಕೆ ಹೋಗಲು ಹೇಳಿದ್ದರು. ಈಗ ರಾಜಕೀಯ ಕಾರಣಕ್ಕಾಗಿ ದೇವೇಗೌಡರನ್ನು ಹೊಗಳುತ್ತಿದ್ದಾರೆ. ಇದನ್ನು ನೋಡಿದರೆ ಜೆಡಿಎಸ್, ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ನುಡಿದರು.
ನಾನು ಜೆಡಿಎಸ್ ವಿರುದ್ಧ ಟೀಕೆ ಮಾಡುತ್ತೇನೆ. ಆದರೆ ಮೈಸೂರು ಭಾಗದಲ್ಲಿ ಜೆಡಿಎಸ್ ಮೇಲೆ ಅಟ್ಯಾಕ್ ಮಾಡುತ್ತೇವೆ ಎಂದು ಹೇಳಿದರು.
ಮೋದಿಯವರು ನಮಗೆ 2+1, 1+1 ಎನ್ನುತ್ತಾರೆ. ಅವರು ಎರಡು ಕ್ಷೇತ್ರಗಳಲ್ಲಿ ನಿಂತಿರಲಿಲ್ಲವೇ? ಅದೇ ರೀತಿ ಕಾರಜೋಳ, ಉದಾಸಿ, ಯಡಿಯೂರಪ್ಪ ಅವರ ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲವೇ ಎಂದು ಹರಿಹಾಯ್ದರು.
ಚಾಮುಂಡೇಶ್ವರಿಯಲ್ಲಿ ಎಷ್ಟೇ ಒಳಒಪ್ಪಂದ ಮಾಡಿಕೊಂಡರೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಯಡಿಯೂರಪ್ಪಗೆ ಕನಿಷ್ಠ ಕಾನೂನು ಜ್ಞಾನವೇ ಇಲ್ಲ. ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎನ್ನುತ್ತಿದ್ದಾರೆ. ಆದರೆ ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಆಪಾದನೆ ಇಲ್ಲ. ಯಡಿಯೂರಪ್ಪಗೆ ಸೋಲಿನ ಭಯ ಆರಂಭವಾಗಿದೆ. ಮತ್ತೆ ಜೈಲಿಗೆ ಹೋಗುತ್ತೇನೆಂಬ ಹೆದರಿಕೆಯೂ ಇದೆ. ಹೀಗಾಗಿ ನಾನೇ ಸಿಎಂ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ರಾಜ್ಯದ ಜನ ಲೂಟಿಕೋರರಿಗೆ ಅಧಿಕಾರ ಕೊಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೆಡ್ಡಿ ಬ್ರದರ್ಸ್ ವಿರುದ್ಧ ನಾನು ಅಂದು ಪಾದಯಾತ್ರೆ ಮಾಡಿದ್ದೆ ಎಂದ ಸಿಎಂ, ಈ ಹಿಂದೆ ಆನಂದ್ಸಿಂಗ್ ಜೈಲಿಗೆ ಹೋಗಿದ್ದರು. ಆದರೆ ಅವರ ಆರೋಪ ಸಾಬೀತಾಗಿಲ್ಲ. ಯಡಿಯೂರಪ್ಪ ಸೇರಿದಂತೆ ಏಳು ಮಂದಿ ವಿರುದ್ಧ ಆರೋಪ ಸಾಬೀತಾಗಲಿದೆ ಎಂದು ಹೇಳಿದರು.