ಭಾಲ್ಕಿಯಲ್ಲಿ ಕುಮಾರಸ್ವಾರಮಿ ಭರ್ಜರಿ ಪ್ರಚಾರ
ಪ್ರಕಾಶ ಖಂಡ್ರೆಗೆ ವಿಧಾನಸೌಧಕ್ಕೆ ಕಳುಹಿಸಿ
ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ಅಭ್ಯರ್ಥಿ ಪ್ರಕಾಶ ಖಂಡ್ರೆ ಪರ ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಬೃಹತ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ತಕ್ಷಣ ರೈತರು ಮಾಡಿರುವ ಎಲ್ಲ ಸಾಲ ಮನ್ನಾ ಮಾಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಕೇಂದ್ರ ಹೇಳುತ್ತಿದೆ. ಇನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸಹಕಾರಿ ಬ್ಯಾಂಕ್‍ಗಳಲ್ಲಿನ ಸಾಲ ಮನ್ನಾ ಘೋಷಿಸಿ ಒಂದು ವರ್ಷವಾದರೂ ಹಣ ಬಂದಿಲ್ಲ. ಆದರೆ ಜೆಡಿಎಸ್ ಅಧಿಕಾರ ಬಂದ ತಕ್ಷಣ ಸಂಪೂರ್ಣ ಸಾಲ ಮನ್ನಾ ಮಾಡುವೆ. ಯುವಕರಿಗಾಗಿ ಒಂದು ಕೋಟಿ ಉದ್ಯೋಗ ಸೃಷ್ಟಿ ಜತೆಗೆ ಎಲ್ಲ ಸಮುದಾಯಗಳ ಹಿತರಕ್ಷಣೆ ಮಾಡುವುದಾಗಿ ಪಕ್ಷದ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಜನರ ಮುಂದಿಟ್ಟ ಕುಮಾರಸ್ವಾಮಿ, ಯಾವುದೇ ಆಮಿಷಗಳಿಗೆ ಒಳಗಾಗದೆ ನೆಮ್ಮದಿ ಬದುಕಿಗೆ ಜೆಡಿಎಸ್‍ಗೆ ಬೆಂಬಲಿಸಿ ಅಧಿಕಾರಕ್ಕೆ ತರುವ ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರೀಯ ಪಕ್ಷಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಜಾನೆ ಲೂಟಿ ಮಾಡಿ ಜನರನ್ನು ಮೊಸ ಮಾಡಲು ಹೊರಟಿವೆ. ಬಿಜೆಪಿ ಮತ್ತು ಕಾಂಗ್ರೆಸ್‍ನ ಬಣ್ಣದ ಮಾತುಗಳಿಗೆ ಯಾರೂ ಕಿವಿಗೊಡಬಾರದು. ರಾಜ್ಯದ ರೈತರ ಮತ್ತು ಜನಸಾಮಾನ್ಯರ ಹಿತ ಕೇವಲ ಜೆಡಿಎಸ್‍ನಿಂದ ಸಾಧ್ಯ. ಹೀಗಾಗಿ ಪಕ್ಷದ ಅಭ್ಯರ್ಥಿ ಪ್ರಕಾಶ ಖಂಡ್ರೆ ಅವರಿಗೆ ಮತ ನೀಡಿ ವಿಧಾನಸೌಧಕ್ಕೆ ಕಳುಹಿಸಿಕೊಡಿ. ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ 51 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿ ಕೃಷಿ ನೀತಿಯಲ್ಲಿ ಅಗಾಧ ಬದಲಾವಣೆ ತರುವ ಮೂಲಕ ರೈತರ ಆತ್ಮಹತ್ಯೆ ತಡೆಗಟ್ಟಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಮಂತ್ರಿ ಹಾಗೂ ಬಸವಕಲ್ಯಾಣ ಜೆಡಿಎಸ್ ಅಭ್ಯರ್ಥಿ ಪಿಜಿಆರ್ ಸಿಂಧ್ಯಾ, ಮಾಜಿ ಮಂತ್ರಿ ಬಂಡೆಪ್ಪ ಖಾಶೆಂಪುರ, ನಸಿಮುದ್ದೀನ್ ಪಟೇಲ್, ಕಪಿಲ ಗೋಡಬೊಲೆ, ಸಂಜಯ ಖೇಣಿ, ಸಿದ್ರಾಮಪ್ಪ ವಂಕೆ, ಅನೀಲ ಶಿಂಧೆ, ಜನಾರ್ದನರಾವ ಬಿರಾದಾರ, ಎಂ.ಜಿ.ರಾಜೋಳೆ, ಯಾದವರಾವ ಕನಸೆ, ಅಶೋಕ ಪಾಟೀಲ್ ಮೆಹಕರ್, ಜೆಡಿಎಸ್ ತಾಲೂಕು ಅಧ್ಯಕ್ಷ ಸತೀಶ ಲದ್ದೆ, ಮಹಾರುದ್ರಪ್ಪ ಕಡಗಂಚೆ, ಸುಭಾಷ ಪಾಟೀಲ್, ಅಶೋಕ ಕರಂಜೆ, ರಮೇಶ ಸೋಲಪುರ, ಗೋವಿಂದರಾವ ಬಿರಾದಾರ, ನಾಮದೇವರಾವ ಪವಾರ್, ಯಾದವರಾವ ಕನಸೆ, ಕೈಲಾಸನಾಥ ಮೀನಕೆರೆ, ಮಲ್ಲಿಕಾರ್ಜುನ ನೇಳಗೆ, ಪ್ರಭು ಗಚ್ಚಿನದೊಡ್ಡಿ, ಶಿವರಾಜ ಸಾಗರ, ಬಸವರಾಜ ಪಾಟೀಲ್ ನಿಟ್ಟೂರ, ಶಿವರಾಜ ಮಜಗೆ ಇತರರಿದ್ದರು. ವೀರಣ್ಣ ಕಾರಬಾರಿ ನಿರೂಪಣೆ ಮಾಡಿದರು.
ಜೆಡಿಎಸ್ ಸೇರ್ಪಡೆ: ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಕಾಶ ಮಾಶೆಟ್ಟೆ, ಅಶೋಕ ಮಡ್ಡೆ, ಸುಭಾಷ ಬಿರಾದಾರ, ರವಿ ಕಣಜೆ ಇತರ ಮುಖಂಡರು ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‍ಗೆ ಸೇರಿದರು.