ಬೆಂಗಳೂರು, ಮೇ 2-ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಾರತಮ್ಯ ಅನುಸರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಆ್ಯಪ್ ಮೂಲಕ ಬಿಜೆಪಿ ಕಿಸಾನ್ ಮೋರ್ಚಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ತಮ್ಮ ಸಮಸ್ಯೆಗಳ ನಿವಾರಣೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಗತ್ಯವಿದೆ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಕೃಷಿ ಮತ್ತು ರೈತರ ಹಿತಾಸಕ್ತಿಯೇ ಬಿಜೆಪಿಯ ಪ್ರಥಮ ಆದ್ಯತೆ ಮತ್ತು ಜವಾಬ್ದಾರಿಯಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ಪುನರುಚ್ಚರಿಸಿದರು.
ಕರ್ನಾಟಕದಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವ ಬಗ್ಗೆ ನನಗೆ ದೂರುಗಳು ಬರುತ್ತಿವೆ. ಆದರೆ ಕಿಸಾನ್ ಮೋರ್ಚಾ ಕಾರ್ಯಕರ್ತರೊಂದಿಗೆ ನಮ್ಮ ಪಕ್ಷದ ಸಂಸದರು ತಮ್ಮ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಮೋದಿ ಹೇಳಿದರು.
ಕರ್ನಾಟಕ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಆಗುವ ಪ್ರಯೋಜನಗಳು ಮತ್ತು ಲಾಭಗಳ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಪ್ರಧಾನಿ ಆರೋಪಿಸಿದರು.
ಬರ ಪರಿಸ್ಥಿತಿ ವೇಳೆ ರಾಜ್ಯ ಸರ್ಕಾರವು ಸಕ್ರಿಯವಾಗಿದ್ದರೆ, ಇದರಿಂದ ರೈತಾಪಿ ವರ್ಗಕ್ಕೆ ಪ್ರಯೋಜನವಾಗುತ್ತಿತ್ತು. ಆದರೆ ಈ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ತಾತ್ಸಾರ ಮನೋಭಾವ ತಳೆದಿದೆ ಎಂದು ಅವರು ದೂರಿದರು.
ತಮ್ಮ ಸರ್ಕಾರವು ಮಂಡಿಸಿದ ಕೇಂದ್ರ ಬಜೆಟ್ ರೈತ ಪರ ಮತ್ತು ಗ್ರಾಮೀಣ ಭಾರತದ ಪರವಾಗಿದೆ ಎಂಧು ಮಾಧ್ಯಮಗಳು ಮೆಚ್ಚುಗೆ ಸೂಚಿಸಿವೆ. ಕೃಷಿಕರ ಹಿತರಕ್ಷಣೆ ಮತ್ತು ಕಲ್ಯಾಣವೇ ನಮ್ಮ ಧ್ಯೇಯ. ಅವರ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಬದ್ಧ ಎಂದು ಪ್ರಧಾನಿ ಹೇಳಿದರು.