ಬೆಂಗಳೂರು, ಮೇ2-ನಿನ್ನೆಯಷ್ಟೇ ರಾಜ್ಯದ ಮೂರು ಕಡೆ ಪ್ರಚಾರ ನಡೆಸುವ ಮೂಲಕ ಬಿಜೆಪಿ ಪರ ಅಲೆ ಎಬ್ಬಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತೆ ನಾಳೆ ಕರುನಾಡಿಗೆ ದಾಂಗುಡಿ ಇಡಲಿದ್ದಾರೆ.
ನಾಳೆ ಪ್ರಧಾನಿಯವರು ಹೈದರಾಬಾದ್ ಕರ್ನಾಟಕದ ಕಲಬುರಗಿ, ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವರು.
ನಿನ್ನೆಯಷ್ಟೇ ಕೊಳ್ಳೆಗಾಲ, ಉಡುಪಿ ಹಾಗೂ ಚಿಕ್ಕೋಡಿಯಲ್ಲಿ ಪ್ರಚಾರ ನಡೆಸಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ನಾಳಿನ ಪ್ರಚಾರದಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುವ ಕಲಬುರಗಿಯಲ್ಲಿ ರಣಕಹಳೆ ಮೊಳಗಿಸಲಿದ್ದಾರೆ.
ಇಲ್ಲಿನ ಹೊರವಲಯದಲ್ಲಿ ಬಿಜೆಪಿ ಸಮಾವೇಶ ನಡೆಯಲಿದ್ದು, ಕಲಬುರಗಿ, ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವರು. ಮೋದಿಯವರೊಂದಿಗೆ ರಾಜ್ಯದ ಯಾವುದೇ ನಾಯಕರು ಭಾಗವಹಿಸುತ್ತಿಲ್ಲ. ಕಾರಣ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವಂತೆ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಕಲಬುರಗಿ ನಂತರ ನರೇಂದ್ರ ಮೋದಿ ಅವರು ಗಡಿನಾಡು ಬಳ್ಳಾರಿಗೆ 3 ಗಂಟೆಗೆ ಆಗಮಿಸಿ ಪ್ರಚಾರ ನಡೆಸಲಿದ್ದಾರೆ. ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಪಕ್ಷವನ್ನು ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಲಿದ್ದಾರೆ.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಬಹು ವರ್ಷಗಳ ನಂತರ ಪ್ರಧಾನಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭರ್ಜರಿ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.
ಕಾರ್ಯಕ್ರಮದ ಉಸ್ತುವಾರಿಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಮೃತ್ಯುಂಜಯ ಜಿನಗ, ಸಂಸದ ಶ್ರೀರಾಮುಲು ಮತ್ತು ಬಳ್ಳಾರಿ ನಗರ ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ವಹಿಸಿಕೊಂಡಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಲು ಬಿಜೆಪಿ ಮುಂದಾಗಿದೆ.
ಬಳ್ಳಾರಿಯಲ್ಲಿ ಪ್ರಚಾರ ನಡೆಸಿದ ಬಳಿಕ ಮೋದಿ ಅವರು ಬೆಂಗಳೂರಿನಲ್ಲಿ ಪ್ರಚಾರ ಮಾಡುವರು. ಕೆಂಗೇರಿಯ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿಯ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಜಯನಗರ, ಗೋವಿಂದರಾಜನಗರ, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ , ರಾಜರಾಜೇಶ್ವರಿ ನಗರ,ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ಮತ್ತಿತರ ಕ್ಷೇತ್ರಗಳ ಅಭ್ಯರ್ಥಿ ಪರ ಮೋದಿ ಮತಯಾಚಿಸಲಿದ್ದಾರೆ.
ನಿನ್ನೆ ಕಾಂಗ್ರೆಸ್ ವಿರುದ್ಧ 2+1 ಫಾರ್ಮುಲ ಬಳಸಿ ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿ ಕೈ ಪಕ್ಷಕ್ಕೆ ನಡುಕ ಸೃಷ್ಟಿಸಿದ್ದರು. ಇನ್ನು ನಾಳೆ ಕಾಂಗ್ರೆಸ್ ವಿರುದ್ಧ ಮತ್ಯಾವ ಅಸ್ತ್ರ ಬಳಸಲಿದ್ದಾರೆಯೋ ಕಾದು ನೋಡಬೇಕು.