ಗೌರಿಬಿದನೂರು, ಮೇ 2- ದೇಶದ ಗಡಿಯಲ್ಲಿ ತನ್ನ ಸೇವೆ ಸಲ್ಲಿಸಿರುವಂತಹ ವ್ಯಕ್ತಿಯನ್ನು ಇಂದು ಗೌರಿಬಿದನೂರು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇನೆ, ಅದು ತಾಲೂಕಿನ ರಕ್ಷಣೆಗಾಗಿಯೇ ಹೊರತು ನಮ್ಮ ಸ್ವಾರ್ಥಕ್ಕಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಆಚಾರ್ಯ ಕೃಷಿ ಮೈದಾನದಲ್ಲಿ ಜೆಡಿಎಸ್ ಪಕ್ಷ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ ಪರ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳ ದುರಾಡಳಿತದ ವಿರುದ್ಧ ಹರಿಹಾಯ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಧಿಕಾರವಧಿಯಲ್ಲಿ 3800 ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಗಳು ಇಂದು ಬೀದಿಪಾಲಾಗಿವೆ. ಸರಕಾರ ಕನಿಷ್ಠ ಕಾಳಜಿಯನ್ನೂ ತೋರಿಲ್ಲ ಎಂದು ವಿಷಾದಿಸಿದರು.
ರಾಜ್ಯದಲ್ಲಿ 58 ಸಾವಿರ ಕೋಟಿ ಬೆಳೆ ನಷ್ಟವಾಗಿದ್ದು, ರೈತರು ಚೇತರಿಸಿಕೊಳ್ಳಲಾಗುತ್ತಿಲ್ಲ, ಕೇಂದ್ರದ ಮೋದಿ ಸರಕಾರ ಬಂಡವಾಳ ಶಾಹಿಗಳ , ವಾಣಿಜ್ಯೋದ್ಯಮಿಗಳ 2.41 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ, ಆದರೆ ಅದೇ ರೈತರ ಒಂದು ಬಿಡಿಗಾಸೂ ಸಹ ಸಾಲ ಮನ್ನಾ ಮಾಡಿಲ್ಲ ಇದು ಬಿಜೆಪಿ ಸರಕಾರಕ್ಕಿರುವ ರೈತರ ಮೇಲಿನ ಕಾಳಜಿ ಎಂದು ಗುಡುಗಿದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳಲ್ಲಿನ ಎಲ್ಲಾ ಸಾಲವನ್ನು ಮನ್ನಾ ಮಾಡುತ್ತೇನೆ, ಹೊಸ ಕೃಷಿ ನೀತಿ ಜಾರಿಗೆ ತರುತ್ತೇನೆ, ಈ ಬಗ್ಗೆ ಈಗಾಗಲೇ ಇಸ್ರೇಲ್ ಮತ್ತು ಬ್ಯಾಂಕಾಕ್ ಗಳಿಗೆ ಬೇಟಿ ನೀಡಿ ಅಲ್ಲಿನ ಕೃಷಿ ಪದ್ದತಿಯ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಹೇಳಿದರು.
ಖಾಸಗಿ ಸಾಲಾ ಮನ್ನಾ: ರೈತರು, ಸ್ತ್ರೀಶಕ್ತಿ ಸಂಘಗಳ ಖಾಸಗಿ ಕ್ಷೇತ್ರಗಳಲ್ಲಿನ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ, ಜತೆಗೆ ಸರಕಾರದಿಂದ ಆರ್ಥಿಕ ನೆರವು ಯೋಜನೆ ಜಾರಿಗೆ ತರಲಾಗುವುದು ಎಂದರು.
ಜೆಡಿಎಸ್ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ ಮಾತನಾಡಿ ಈ ಚುನಾವಣೆ ಬದಲಾವಣೆಯ ಚುನಾವಣೆಯಾಗಿದೆ, ದುರಾಂಕಾರಿ ಹಾಗೂ ತೊಘಲಕ್ ದರ್ಭಾರ್ ನಡೆಸುತ್ತಿರುವ ಶಾಸಕ ಎನ್.ಎಚ್.ಶಿವಶಂಕರರೆಡ್ಡಿಯವರ ಕಿತ್ತೊಗೆಯುವ ಚುನಾವಣೆ ಇದಾಗಿದೆ, ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯ ಮಂತ್ರ ಜಪಿಸಿಕೊಂಡು ಇಲ್ಲಿನ ಕಾರ್ಖಾನೆಗಳಲ್ಲಿ ನಮ್ಮವರಿಗೆ 200 ರೂ ಕೂಲಿ ಕೆಲಸ , ಉತ್ತರ ಭಾರತದವರಿಗೆ 50 ಸಾವಿರ ಸಂಬಳ ಇದು ಕ್ಷೇತ್ರ ಶಾಸಕರ ಅಭಿವೃದ್ದಿ ಎಂದು ಲೇವಡಿ ಮಾಡಿದರು.
ಸೇರ್ಪಡೆ: ಕಾಂಗ್ರೆಸ್ ಪಕ್ಷ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಜಿ.ವೇಣುಗೋಪಾಲರೆಡ್ಡಿ, ಜಿ.ಕೆ.ಸತೀಶ್, ಅಲ್ಲೀಪುರ ಪ್ರೇಮ್, ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಆರ್.ಪಿ.ಗೋಪಾಲಗೌಡ, ಮಹಿಳಾ ಘಟಕದ ರಾಮಾಂಜಿನಮ್ಮ, ತಾ.ಪಂ. ಸದಸ್ಯ ಇಡಗೂರು ನರಸಿಂಹಮೂರ್ತಿ, ಸೇರಿದಂತೆ ಹಲವಾರು ಮುಖಂಡರುಗಳು ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ತಾಲೂಕು ಅಧ್ಯಕ್ಷ ಸಿ.ಮಂಜುನಾಥರೆಡ್ಡಿ, ಕಾರ್ಯಾಧ್ಯಕ್ಷ ಕೆ.ಎಸ್.ಅನಂತರಾಜ್, ರಾಜ್ಯ ಕಾರ್ಯದರ್ಶಿ ಡಾ.ರೋಷನ್ ಅಬ್ಬಾಸ್‍ಮುಖಂಡರುಗಳಾದ ಎಸ್.ಹೆಚ್.ಲಕ್ಷ್ಮೀನಾರಾಯಣ್, ಆರ್.ಆಶೋಕ್‍ಕುಮಾರ್, ವೇಣುಗೋಪಾಲನಾಯಕ್, ಅನಂತರಾಜ್, ಸುಬಾನ್,ಮಂಜುನಾಥ್, ಮುಂತಾದವರು ವೇದಿಕೆಯಲ್ಲಿ ಹಾಜರಿದ್ದರು.
ಮೌನಾಚರಣೆ: ಸಮಾವೇಶದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಇತ್ತೀಚೆಗೆ ಜೆಡಿಎಸ್ ಕಾರ್ಯಕರ್ತ ರಾಮರೆಡ್ಡಿ ಕೊಲೆಯಾದ ಹಿನ್ನೆಲೆಯಲ್ಲಿ ಮೃತನ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಿದರು.
ಇದೇ ವೇಲೆ ಮೃತ ರಾಮರೆಡ್ಡಿ ಕುಟುಂಬದ ಪೆÇೀಷಕರು ಹೆಚ್.ಡಿ.ಕೆ.ಬಳಿ ತಮಗಾಗಿರುವ ಅನ್ಯಾಯದ ಬಗ್ಗೆ ಅಳನ್ನು ತೋಡಿಕೊಂಡರು, ಇದಕ್ಕೆ ಪ್ರತಿಕ್ರಿಯಿಸಿ ಚುನಾವಣೆ ಮುಗಿದ ಬಳಿಗೆ ನಿಮ್ಮ ಸಮಸ್ಯೆಗೆ ಸಂಪೂರ್ಣವಾಗಿ ಸ್ಪಂದಿಸುವ ಭರವಸೆ ನೀಡಿದರು.