ಮೈಸೂರು,ಮೇ2- ಮತ ಕೇಳಲು ಹೋದ ಶಿಕ್ಷಣ ಸಚಿವರಿಗೆ ಮತದಾರರೊಬ್ಬರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಗರದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಸಚಿವ ತನ್ವೀರ್ ಸೇಠ್ ಅವರು ಎನ್.ಆರ್.ಕ್ಷೇತ್ರದಲ್ಲಿ ಮತಯಾಚನೆಗೆ ತೆರಳಿದಾಗ ಪರಮೇಶ್ವರ್ ಎಂಬಾತ, ನಾನು ನಿಮ್ಮ ತಂದೆ ಅಜೀಜ್ ಸೇಠ್ ಅವರ ಕಾಲದಿಂದಲೂ ಕಾಂಗ್ರೆಸ್‍ಗೆ ಮತ ಹಾಕುತ್ತಿದ್ದೇನೆ. ನಿಮಗೂ ಮತ ಹಾಕಿದ್ದೇನೆ. ಆದರೆ ಚುನಾವಣೆಯಲ್ಲಿ ಗೆದ್ದು 5 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಲ್ಲಿಗೆ ಬರುತ್ತಿರುವುದು ಎಂದು ತರಾಟೆ ತೆಗೆದುಕೊಂಡಿದ್ದಾರೆ.
ನಾವು ಮನೆ ಬಳಿ ಬಂದರೆ ನೀವು ಸಿಗುವುದಿಲ್ಲ. ಕ್ಷೇತ್ರಕ್ಕೆ ನೀವೂ ಬರುವುದಿಲ್ಲ. ನೋಡಿ ರಸ್ತೆ ಹೇಗೆ ಹಾಳಾಗಿ ಎಂದು ಕೆಟ್ಟುಹೋದ ರಸ್ತೆಯನ್ನು ತೋರಿಸಿ ಪ್ರಶ್ನಿಸಿದರು.
ನಮ್ಮ ಕ್ಷೇತ್ರದಲ್ಲಿ ಎಷ್ಟು ಶಿಕ್ಷಣ ಸಂಸ್ಥೆಗಳಿವೆ. ಅವುಗಳ ಅಭಿವೃದ್ಧಿ ಸಹ ಮಾಡಿಲ್ಲ. ಕ್ಷೇತ್ರವನ್ನು ಅಭಿವೃದ್ದಿ ಮಾಡಿಲ್ಲ. 5 ವರ್ಷ ಆದ ಮೇಲೆ ಮತ ಕೇಳಲು ಬಂದಿದ್ದೀರಾ ಎಂದಾಗ, ಸಚಿವ ತನ್ವೀರ್ ಸೇಠ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ನಿಂತಿದ್ದರು.
ಈ ವೇಳೆ ಸಚಿವರ ಆಪ್ತ ಮಂಜುನಾಥ್ ಮಧ್ಯಪ್ರವೇಶಿಸಿದಾಗ, ಪರಮೇಶ್ವರ್ ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಚಿವರು ಕಾರು ಏರಿ ತೆರಳಿದರು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪರಮೇಶ್ವರ್ ನಡುವೆ ಮಾತಿನ ಚಕಮಕಿ ನಡೆಯಿತು.