ಬೆಂಗಳೂರು: ಬಾಲಿವುಡ್ ಸ್ಟಾರ್ ಗಳಾದ ಅರ್ಬಾಜ್ ಖಾನ್ ಮತ್ತು ಸೋಹೆಲ್ ಖಾನ್ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ. ನೌಹೀರಾ ಶೇಕ್ ಅವರು ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿ, ಹೊಸ ಸಂಚಲನ ಮೂಡಿಸಿದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಈಜಿಪುರ ಸಿಗ್ನಲ್ ಬಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ಸಹಾಸ್ರರು ಅಭಿಮಾನಿಗಳು, ಪಕ್ಷದ ಕಾರ್ಯಕರ್ತ ಮತ್ತು ಅಪಾರ ಬೆಂಬಲಿಗರ ಘೋಷಣೆಗಳ ನಡುವೆ ರೋಡ್ ಶೋ-ಬೈಕ್ ರ್ಯಾಲಿಗೆ ಭರ್ಜರಿ ಚಾಲನೆ ನೀಡಿದರು.
ಈಜಿಪುರ ಸಿಗ್ನಲ್ ಬಳಿ ಆರಂಭವಾದ ರ್ಯಾಲಿ ಕೋರಮಂಗಲ ಪಾಸ್ ಪೋರ್ಟ್ ಕಚೇರಿ, ಸೋನಿ ವರ್ಲ್ಡ್ ಜಂಕ್ಷನ್, ವಾಟರ್ ಟ್ಯಾಂಕ್, ಅಯ್ಯಪ್ಪ ಟೆಂಪಲ್, ಸಿಲ್ಕ್ ಬೋರ್ಡ್ ಮೂಲಕ ಬಿಟಿಎಂ ಬಡಾವಣೆಗೆ ಕಾಲಿಟ್ಟಿತು. ತಿಲಕ್ ನಗರ, ಬನ್ನೇರುಘಟ್ಟ ರಸ್ತೆ, ಬಿಳೆಕಲ್ಲು, ಕೋಡಿಚಿಕ್ಕಹಳ್ಳಿ, ಬೇಗೂರು ಮುಖ್ಯರಸ್ತೆ, ಡೈರಿ ಸರ್ಕಲ್ ಮಾರ್ಗವಾಗಿ ಜಯನಗರ ಕ್ಷೇತ್ರಕ್ಕೆ ತಲುಪಿತು.ನಂತರ ಪದ್ಮನಾಭನಗರ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲೂ ಭರ್ಜರಿ ರೋಡ್ ಶೋ-ರ್ಯಾಲಿ ನಡೆಯಿತು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಂಇಪಿ ಅಭ್ಯರ್ಥಿ ಶೇಕ್ ಇಮ್ರಾನ್, ಬಿಟಿಎಂ ಲೇಔಟ್ ಕ್ಷೇತ್ರದ ಅಭ್ಯರ್ಥಿ ನರ್ಸ್ ಜಯಲಕ್ಷ್ಮಿ, ಜಯನಗರ ಕ್ಷೇತ್ರದ ಅಭ್ಯರ್ಥಿ ಸೈಯದ್ ಜಬಿ ಪದ್ಮನಾಭನಗರದ ಕ್ಷೇತ್ರದ ಅಭ್ಯರ್ಥಿ ಅಕ್ಮಲ್ ಶರೀಫ್ ಮತ್ತು ಅವರ ಬೆಂಬಲಿಗರು ಪಾಲ್ಗೊಂಡು ರೋಡ್ ಶೋಗೆ ಹೊಸ ಮೆರಗು ನೀಡಿದರು.
ನಗರದ ಮತದಾರರು ಪ್ರಬ್ಧುದರಾಗಿದ್ದು 28 ವಿಧಾನಸಭಾ ಕ್ಷೇತ್ರಗಳ ಪೈಕಿ ಹೆಚ್ಚಿನ ಕ್ಷೇತ್ರಗಳಲ್ಲಿ ಎಂಇಪಿ ಭರ್ಜರಿ ಜಯ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಎಂಇಪಿ ಪರವಾದ ಅಲೆಯಿದೆ, ಅದೇ ರೀತಿಯ ಪ್ರತಿಕ್ರಿಯೆ ನಗರದಲ್ಲೂ ಕಂಡು ಬಂದಿದೆ. ರಾಜ್ಯದ ಉದ್ದಗಲಕ್ಕೂ ಖಾನ್ ಸಹೋದರರು ಪ್ರಚಾರ ಮಾಡಿ ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ ಎಂದರು.