ಕುಣಿಗಲ್, ಮೇ 2-ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಅನುಮತಿ ಇಲ್ಲದೆ ಕಾರ್ಯಕರ್ತರಿಗೆ ಬಿರಿಯಾನಿ ಮಾಡಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ದಾಳಿ ನಡೆಸಿ ಒಬ್ಬನನ್ನು ಬಂಧಿಸಿ ಬಿರಿಯಾನಿ ವಶಪಡಿಸಿಕೊಂಡಿರುವ ಪ್ರಸಂಗ ನಡೆದಿದೆ.
ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ಮಾಡದೆ ತಟಸ್ಥವಾಗಿರುವುದನ್ನು ಅರಿತ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಸಭೆಯನ್ನು ಆಯೋಜಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ರಾಮಸ್ವಾಮಿಗೌಡರ ಬೆಂಬಲಿಗ ಕುಂದೂರು ತಮ್ಮಣ್ಣನವರು ಕಾರ್ಯಕರ್ತರಿಗೆ ಬಿರಿಯಾನಿ ಊಟ ಏರ್ಪಡಿಸಿದ್ದರು.
11.30ಕ್ಕೆ ಇರುವ ಸಭೆಗೆ ವಿಳಂಬವಾಗಿ ಬಂದ ಕಾರಣ ಬಿರಿಯಾನಿ ಊಟದ ವ್ಯವಸ್ಥೆ ವಿಷಯ ವಿರೋಧ ಪಕ್ಷದವರಿಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಆ ವೇಳೆಗಾಗಲೇ ಡಿ.ಕೆ.ಶಿವಕುಮಾರ್ ಅವರು ಸಭೆಗೆ ಆಗಮಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಅಧಿಕಾರಿಗಳ ದಾಳಿಯಿಂದಾಗಿ ಡಿಕೆಶಿ ಸಭೆಯನ್ನು ಮೊಟಕುಗೊಳಿಸಿ ಬಿ.ಬಿ.ರಾಮಸ್ವಾಮಿಗೌಡರ ಜೊತೆಗೆ ಪಟ್ಟಣದ ಕಾಂಗ್ರೆಸ್ ಕಚೇರಿಗೆ ಬಂದರು. ಈ ಮಧ್ಯೆ ಅನುಮತಿ ಇಲ್ಲದೆ ಅಡುಗೆ ಮಾಡಿರುವುದನ್ನು ಅಧಿಕಾರಿಗಳು ಪ್ರಶ್ನಿಸಿದ ವೇಳೆ ಕಾರ್ಯಕರ್ತರು ದುರ್ವತನೆಯಿಂದ ವರ್ತಿಸಿದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಚುನಾವಣಾಧಿಕಾರಿ ತಹಶೀಲ್ದಾರ್ ಎಸ್.ನಾಗರಾಜು ಊಟವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಂಗ್ರೆಸ್ ಕಚೇರಿ ನಮ್ಮ ಮನೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ರಾಮಸ್ವಾಮಿಗೌಡರ ಜೊತೆ ಮಾತುಕತೆ ಮುಂದುವರೆಸಿ ಅಭ್ಯರ್ಥಿಗಳ ಜೊತೆಗೂಡಿ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದರು.
ಇದನ್ನು ನಿರಾಕರಿಸಿದ ಬಿಬಿಆರ್ ಮತ್ತು ಬೆಂಬಲಿಗರ ವಿರುದ್ಧ ಸಚಿವರು ಏರು ಧ್ವನಿಯಲ್ಲಿ ಮಾತನಾಡಿದ್ದರಿಂದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಜೊತೆಯಾಗಿ ಪ್ರಚಾರ ಮಾಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆಗ ಡಿ.ಕೆ.ಶಿವಕುಮಾರ್ ಅವರು ಬೆಂಬಲಿಗರ ಬಗ್ಗೆ ಅರಿವಿದೆ. ಚುನಾವಣೆಯಲ್ಲಿ ನಿಮ್ಮ ಬೂತ್‍ಗಳಲ್ಲಿ ಕಾಂಗ್ರೆಸ್ ಮತಗಳ ಲೆಕ್ಕಾಚಾರದ ಬಗ್ಗೆ ನಿಮ್ಮ ನಾಯಕರ ಭವಿಷ್ಯ ನಿರ್ಧರಿಸಲಾಗುವುದು ಎಂದು ಹೇಳಿದರು.