ವಿಶ್ವದ ಅತ್ಯಂತ ಮಲೀನ ನಗರಗಳಲ್ಲಿ ನವದೆಹಲಿ ಹಾಗೂ ವಾರಣಾಸಿ ಸೇರಿದಂತೆ 13 ಸಿಟಿಗಳು!

ನವದೆಹಲಿ, ಮೇ 2-ವಿಶ್ವದ ಅತ್ಯಂತ ಮಲೀನ ನಗರಗಳಲ್ಲಿ ರಾಜಧಾನಿ ನವದೆಹಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸಿರುವ ವಾರಣಾಸಿ ಸೇರಿದಂತೆ 13 ಸಿಟಿಗಳು ಸೇರಿವೆ.
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಒ) ಬಹಿರಂಗಗೊಳಿಸಿರುವ ವರದಿಯಲ್ಲಿ 2016ರಲ್ಲಿ ಈ ನಗರಗಳ ಮಾಲ್ಯಿನಕಾರಕ ಕಣಗಳ ಪ್ರಮಾಣ 2.5ಕ್ಕಿಂತ ಹೆಚ್ಚಿತ್ತು ಎಂದು ತಿಳಿಸಲಾಗಿದೆ.
ಭಾರತದಲ್ಲಿ ಅಪಾಯಕಾರಿ 2.5 ಪಿಎಂಗಿಂತ(ಮಾಲಿನ್ಯ ಪ್ರಮಾಣ) ಅಧಿಕ ಮಾಲಿನ್ಯಕಾರಕ ಕಣಗಳಿರುವ ಇತರ ನಗರಗಳೆಂದರೆ : ಕಾನ್ಪುರ, ಫರೀದಾಬಾದ್, ಗಯಾ, ಪಾಟ್ನಾ, ಆಗ್ರಾ, ಮುಜಾಫರ್‍ಪುರ್, ಶ್ರೀನಗರ, ಗುರ್‍ಗಾಂವ್, ಜೈಪುರ, ಪಾಟಿಯಾಲ ಮತ್ತು ಜೋಧ್‍ಪುರ್.
ನಂತರದ ಸ್ಥಾನದಲ್ಲಿ ಕುವೈತ್‍ನ ಅಲ್ ಸಲೇಂ, ಚೀನಾ ಮತ್ತು ಮಂಗೋಲಿಯಾದ ಕೆಲವು ನಗರಗಳು ಪಟ್ಟಿಯಲ್ಲಿವೆ.
ಭಾರತ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳು ಅಪಾಯಕಾರಿ ಮಟ್ಟದಲ್ಲಿರುವ ಮಾಲಿನ್ಯವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಮಾಡಿದೆ.
ಪ್ರಪಂಚದ ಹತ್ತು ಮಂದಿಯಲ್ಲಿ ಒಂಭತ್ತು ಜನರು ಅಧಿಕ ಮಾಲಿನ್ಯಕಾರಕ ಕಣಗಳಿರುವ ಗಾಳಿಯನ್ನು ಉಸಿರಾಡುತ್ತಿದ್ದಾರೆ ಎಂಬ ಆತಂಕಕಾರಿ ಅಂಶವನ್ನೂ ವರದಿ ಬಹಿರಂಗಗೊಳಿಸಿದೆ.
ವಾಯು ಮಾಲಿನ್ಯದಿಂದ ಜಾಗತಿಕ ಮಟ್ಟದಲ್ಲಿ 42 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಆಗ್ನೇಯ ಏಷ್ಯಾ ದೇಶಗಳಲ್ಲೇ 13 ಲಕ್ಷ ಜನರು ಮೃತಪಟ್ಟಿದ್ದಾರೆ. ಇದು ವಾಯು ಮಾಲಿನ್ಯದಿಂದ ಮೃತಪಟ್ಟ ಜನರಲ್ಲಿ ಶೇ.30ರಷ್ಟು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ