ಮಾಜಿ ಸಚಿವ ವಿ.ಸೋಮಣ್ಣರಿಂದ ಮತಯಾಚನೆ: ಭ್ರಷ್ಟಾಚಾರ ರಹಿತ ಅಭಿವೃದ್ದಿ ಪರ ಆಡಳಿತ ನೀಡುವ ವಾಗ್ದಾನ

ಬೆಂಗಳೂರು,ಮೇ1-ಗೋವಿಂದರಾಜು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವಿ.ಸೋಮಣ್ಣ ಇಂದು ಕ್ಷೇತ್ರದ ಕಾವೇರಿಪುರ, ಗೋವಿಂದರಾಜನಗರ ಸೇರಿದಂತೆ ಮತ್ತಿತರ ಕಡೆ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಮತಯಾಚನೆ ಮಾಡಿದರು.

ಭ್ರಷ್ಟಾಚಾರ ರಹಿತ ಅಭಿವೃದ್ದಿ ಪರ ಆಡಳಿತ ನೀಡುವ ವಾಗ್ದಾನದೊಂದಿಗೆ ಕ್ಷೇತ್ರಾದ್ಯಂತ ಪ್ರಚಾರ ನಡೆಸುತ್ತಿರುವ ಸೋಮಣ್ಣನವರಿಗೆ ಮತದಾರರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಅವರ ನೈತಿಕ ಶಕ್ತಿಯನ್ನು ದ್ವಿಗುಣಗೊಳಿಸಿದೆ.
ಬೆಳಗಿನಿಂದಲೇ ಬಿಬಿಎಂಪಿ ಸದಸ್ಯರಾದ ಶಾಂತಕುಮಾರಿ, ಉಮೇಶ್ ಶೆಟ್ಟಿ , ದಾಸೇಗೌಡ, ವಾಗೀಶ್, ಮಾಜಿ ಬಿಬಿಎಂಪಿ ಸದಸ್ಯರಾದ ವಿಶ್ವನಾಥ್ ಗೌಡ ಸೇರಿದಂತೆ ಹಲವರ ಜೊತೆ ಸೋಮಣ್ಣ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.

ಕ್ಷೇತ್ರದಲ್ಲಿರುವ ಕಾರ್ಮಿಕರು, ಮಧ್ಯಮವರ್ಗದವರು, ವ್ಯಾಪಾರಸ್ಥರು, ಹಿಂದುಳಿದವರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಪ್ರತಿಯೊಬ್ಬರಿಗೂ ಉತ್ತಮ ಸೌಲಭ್ಯಗಳನ್ನು ನೀಡಲಾಗುವುದು. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ರಾಜ್ಯದಲ್ಲೂ ಅಧಿಕಾರಕ್ಕೆ ಬಂದರೆ ಅಂದರೆ ಕೇಂದ್ರದ ಯೋಜನೆಗಳನ್ನು ಜಾರಿಮಾಡುವ ವಾಗ್ದಾನ ಮಾಡಿದರು.

ಕಾರ್ಮಿಕರು ಹಾಗೂ ಅವರ ಕುಟುಂಬ ವರ್ಗಕ್ಕೆ ರಕ್ಷಣೆ ಸಿಗಬೇಕಾದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು. ಬೇರೆ ಯಾವುದೇ ಸರ್ಕಾರ ಬಂದರೂ ರಕ್ಷಣೆ ಸಾಧ್ಯವಿಲ್ಲ ಎಂದರು.

ಈ ಹಿಂದೆ ನಡೆದ ಉಪಚುನಾವಣೆಯಲ್ಲಿ ಸೋತಿದ್ದೇನೆ. ಈ ಬಾರಿ ಮತ್ತೆ ಬಂದಿದ್ದೇನೆ ನನಗೆ ಬೆಂಬಲಿಸಿದರೆ ನಿಮ್ಮಲ್ಲಿ ನಾನೂ ಒಬ್ಬನಾಗಿ ಕೆಲಸ ಮಾಡುತ್ತೇನೆ. ಕಾರ್ಮಿಕರಿಗೆ ಭದ್ರತೆ, ಕುಟುಂಬದವರಿಗೆ ಆರೋಗ್ಯ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಈ ಬಾರಿ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯ ಮಂತ್ರಿ ಅಗುವದನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎಂದರು.

ಐದು ವರ್ಷಗಳ ಆಡಳಿತ ನಡೆಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಕಾರ್ಮಿಕರನ್ನು ನಿರ್ಲಕ್ಷಸಿದ್ದಾರೆ. ಸರ್ಕಾರ ದಿಂದ ಕಾರ್ಮಿಕರ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲು ವಿಫಲರಾಗಿದ್ದರೆ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ