ಬೆಂಗಳೂರು, ಮೇ 1- ತೀವ್ರ ಕುತೂಹಲ ಕೆರಳಿಸಿದ್ದ ಬಾದಾಮಿ ವಿಧಾನಸಭೆ ಮತಕ್ಷೇತ್ರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಬಿರುಸಿನ ಪ್ರಚಾರ ನಡೆಸಿದರು. ನಗರದ ಅಡಗಲ್ಲು ಕೆರೂರು ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಿದ ಅವರು ಮನೆ ಮನೆಗೆ ತೆರಳಿ ಮತಯಾಚಿಸಿದರು.
ಉರಿ ಬಿಸಿಲನ್ನು ಲೆಕ್ಕಿಸದೆ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಂಸದ ಪಿ.ಸಿ.ಗದ್ದಿಗೌಡರ್, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಮುಖಂಡರಾದ ಶಾಂತಗೌಡ ಪಾಟೀಲ, ನಾಗರಾಜ ಎ.ಎಸ್.ಸೇರಿದಂತೆ ಇನ್ನಿತರರಿದ್ದರು.
ಕಾಂಗ್ರೆಸ್ ಪ್ರಚಾರ: ಕಾಂಗ್ರೆಸ್ ಕಾರ್ಯಕರ್ತರು ಚುರುಕಿನಿಂದ ಪ್ರಚಾರ ನಡೆಸಿದ್ದು, ಅಭ್ಯರ್ಥಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ಬಿರುಸಿನ ಪ್ರಚಾರ ಕೈಗೊಂಡರು.
ಉರಿ ಬಿಸಿಲನ್ನೂ ಲೆಕ್ಕಿಸದೆ ನೂರಾರು ಕಾರ್ಯಕರ್ತರು ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಮುಖಂಡರಾದ ಎಂ.ಬಿ.ಯಲಗಾರ ಸೇರಿದಂತೆ ಇನ್ನಿತರರಿದ್ದರು.