ಭಾರಿ ಅಂತರದಿಂದ ನನ್ನನ್ನು ಗೆಲ್ಲಿಸಬೇಕು ಎಂದು ಈಗಾಗಲೇ ಜನರು ತೀರ್ಮಾನಿಸಿದ್ದಾರೆ – ಸಂಸದ, ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು

ಪಾಂಡವಪುರ, ಮೇ 1- ಎಲ್ಲ ಕಡೆ ಅಂತರ ಕಾಯ್ದುಕೊಳ್ಳುವೆ. ಪ್ರತಿ ಗ್ರಾಮದಲ್ಲಿ ಭಾರಿ ಅಂತರದಿಂದ ನನ್ನನ್ನು ಗೆಲ್ಲಿಸಬೇಕು ಎಂದು ಈಗಾಗಲೇ ಜನರು ತೀರ್ಮಾನಿಸಿದ್ದಾರೆ ಎಂದು ಸಂಸದ, ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಲೇವಡಿ ಮಾಡಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್, ಬಿಜೆಪಿ, ರೈತಸಂಘ ತೊರೆದು ಜೆಡಿಎಸ್ ಪಕ್ಷ ಸೇರಿದ ನೂರಾರು ಜನರನ್ನು ಪಕ್ಷಕ್ಕೆ ಬರಮಾಡಿಕೊಂಡು ನಂತರ ಅವರು ಮಾತನಾಡಿದರು.
ದುದ್ದ ಹೋಬಳಿಯಲ್ಲಿ 10 ರಿಂದ 12 ಸಾವಿರ ಲೀಡ್ ಪಡೆಯುವೆ. ಜತೆಗೆ ಪಾಂಡವಪುರ ತಾಲೂಕಿನ ಎಲ್ಲ 5 ಜಿಪಂ ಕ್ಷೇತ್ರಗಳ ಗ್ರಾಮಗಳು ಹಾಗೂ ಪಾಂಡವಪುರ ಪುರಸಭೆಯ 23 ವಾರ್ಡ್‍ಗಳಲ್ಲಿ 100ಕ್ಕೆ 100ರಷ್ಟು ಜನರು ನನ್ನನ್ನು ಗೆಲ್ಲಿಸಲು ನಿರ್ಧಾರ ಮಾಡಿದ್ದಾರೆ ಎಂದರು.
ಮುಂದಿನ 10 ದಿನಗಳಲ್ಲಿ ಎಲ್ಲವೂ ಜೆಡಿಎಸ್ ಮಯವಾಗಲಿದೆ. ಹೀಗಾಗಿ ಜೆಡಿಎಸ್ ಕಾರ್ಯಕರ್ತರು ಮತದಾರರನ್ನು ಮತಗಟ್ಟೆಗೆ ಕರೆದೊಯ್ದು ಜೆಡಿಎಸ್‍ಗೆ ಮತ ಹಾಕಬೇಕಷ್ಟೇ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಧರ್ಮರಾಜು, ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಸದಸ್ಯ ಸಾಮಿಲ್ ತಿಮ್ಮೇಗೌಡ, ಮುಖಂಡರಾದ ಡಾ.ಟಿ.ಸಿದ್ದೇಗೌಡ, ಎಸ್.ಎ.ಮಲ್ಲೇಶ್, ಎಂ.ಬಿ.ಶ್ರೀನಿವಾಸ್, ರಾಮಚಂದ್ರು ಇತರರಿದ್ದರು.
ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಕೆ.ಜಿ.ರಾಮಕೃಷ್ಣ, ಜೆ.ಪಿ.ಶಿವಶಂಕರ್, ಮಾಣಿಕ್ಯನಹಳ್ಳಿ ಬೋರೇಗೌಡ, ಜವರೇಗೌಡ, ಕದಲಗೆರೆ ಪುಟ್ಟಸ್ವಾಮಿ, ಜಕ್ಕನಹಳ್ಳಿ ಅಶ್ವತ್ಥಕುಮಾರೇಗೌಡ, ದುದ್ದ ಹೋಬಳಿಯ ಮಲ್ಲಿಗೆರೆ ಮಹದೇವಪ್ಪ, ಬಿಜೆಪಿಯ ಸಂಜೀವ್ ನೇಕಾರ್, ಸೋಮಚಾರಿ ಹಾಗೂ ರೈತಸಂಘದ ಕಾಡೇನಹಳ್ಳಿ ಚಂದ್ರು ಸೇರಿದಂತೆ ನೂರಾರು ಮಂದಿ ಜೆಡಿಎಸ್ ಸೇರ್ಪಡೆಗೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ